ಕದರವೇ ಅಧ್ಯಕ್ಷ ಎಲಿಷಾ ಎಲಕಪಾಟಿ ಬಂಧನ

1KWR1
Published on

ಕಾರವಾರ: ಹಿಂದು ದೇವತೆಗಳ ಬಗ್ಗೆ ಅವಾಚ್ಯ, ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಅವರನ್ನು ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

ಎಲಕಪಾಟಿ ಶಿವ, ಪಾರ್ವತಿ, ವಿಷ್ಣು, ದೇವರು, ವಾಲ್ಮೀಕಿಯಂಥ ಋಷಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋವನ್ನು ಅವರದ್ದೇ ಸಂಘಟನೆಯಲ್ಲಿರುವ ಸದಸ್ಯರು ಪೊಲೀಸರಿಗೊಪ್ಪಿಸಿ ದೂರು ದಾಖಲಿಸಿದ್ದರು. ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ಶುಕ್ರವಾರ ಪಕ್ಷ ಭೇದ ಮರೆತು ನಗರದ ನೂರಾರು ಹಿಂದು ಶ್ರದ್ಧಾಳುಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಎಲಕಪಾಟಿ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ನಗರದ ಮಿತ್ರ ಸಮಾಜ ಮೈದಾನದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ‘ಜೈ ಶ್ರೀರಾಮ’ ‘ಹರ ಹರ ಮಹಾದೇವ’ ಜಯೋಷ ಮೊಳಗಿಸಿದರು. ನಗರದ ಗ್ರಾಮೀಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಎಲಿಷಾ ಎಲಕಪಾಟಿ ಅವರನ್ನು ತಕ್ಷಣ ಬಂಧಿಸುವಂತೆ ಪಟ್ಟು ಹಿಡಿದರು. 24 ಗಂಟೆಯಲ್ಲಿ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಅಲ್ಲಿಂದ ತೆರಳಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು. ಎಲಕಪಾಟಿ ಅವರ ವಿರುದ್ಧ ಇರುವ ಇತರ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹಿರಿಯ ವಕೀಲ ಕೆ.ಆರ್. ದೇಸಾಯಿ ಮಾತನಾಡಿ, ಜವಾಬ್ದಾರಿಯುತ ಸಂಘಟನೆಯ ಮುಖಂಡನೊಬ್ಬನ ಮಾತಿನಿಂದ ನಮ್ಮೆಲ್ಲರ ಭಾವನೆಗಳಿಗೆ ತೀರ ನೋವಾಗಿದೆ. ಇದರಿಂದ ಅವರನ್ನು ಗಡಿಪಾರು ಮಾಡಬೇಕು. ಶೀಘ್ರ ಕ್ರಮ ವಹಿಸಬೇಕು. ಇಲ್ಲದಿದ್ದರೆ ಸೆ. 4ರಂದು ಕಾರವಾರ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಕಾಂಗ್ರೆಸ್ ಮುಖಂಡ ಪ್ರಭಾಕರ ಮಾಳ್ಸೇಕರ್, ಬಿಜೆಪಿ ನಗರ ಅಧ್ಯಕ್ಷ ನಾಗೇಶ ಕುರ್ಡೇಕರ್, ನಾಗರಾಜ ನಾಯಕ, ನಗರಸಭೆ ಸದಸ್ಯ ರವಿರಾಜ ಅಂಕೋಲೆಕರ್, ರೇಷ್ಮಾ ಮಾಳ್ಸೇಕರ್, ಸ್ನೇಹಲ್ ಹರಿಕಂತ್ರ, ಮಾಲಾ ಹುಲಸ್ವಾರ, ಉಲ್ಲಾಸ ಕೇಣಿ, ಮನೋಜ ಬಾಂದೇಕರ್, ಪ್ರೇಮಾನಂದ ಗುನಗಾ, ಹಿಂದು ಸಂಘಟನೆಗಳ ಪ್ರಮುಖರಾದ ಬಿ.ಎಸ್. ಪೈ, ರಾಜೇಶ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಎಂ. ಹೆಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net