ವಕ್ರದಂತ ಹೊಂದಿದ್ದ ಕಾಡಾನೆ ಮೃತ

Oplus_131072
Oplus_131072
Published on

ಯಳಂದೂರು : ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷತ ಅರಣ್ಯ ಪ್ರದೇಶದ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕ ಮೂಡಿಸುತ್ತಿದ್ದ ವಕ್ರದಂತ ಹೊಂದಿದ್ದ ಕಾಡಾನೆ ಮೃತಪಟ್ಟಿದೆ.

ಸೋಮವಾರ ಅರಣ್ಯ ಇಲಾಖೆಯ ಸಿಬ್ಬಂದಿ ಯಳಂದೂರು ವನ್ಯಜೀವಿ ವಲಯದ ಬಾವಿಯಾಣೆ ಶಾಖೆಯ ಕಡಿತಾಳಕಟ್ಟೆ ಗಸ್ತಿನಲ್ಲಿ ತಿರುಗುತ್ತಿದ್ದಾಗ ಇಲ್ಲಿನ ವೀರನಕಾನು ಅರಣ್ಯ ಪ್ರದೇಶದಲ್ಲಿ 50 ರಿಂದ 55 ವರ್ಷ ವಯಸ್ಸಿನ ಈ ಗಂಡಾನೆ ಮೃತಪಟ್ಟಿರುವುದು ಕಂಡುಬಂದಿದೆ.

ಕೂಡಲೇ ಅರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಿಆರ್‌ಟಿ ನಿರ್ದೇಶಕ ಶ್ರೀಪತಿ, ಎಸಿಎಫ್ ಪ್ರಕಾಶ್, ಅಕ್ಷಯ್, ಅಶೋಕ್, ಆರ್‌ಎಫ್‌ಒ ನಾಗೇಂದ್ರ ನಾಯಕ ಹಾಗೂ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಮಲ್ಲೇಶಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಂಡೀಪುರ ಹುಲಿ ಯೋಜನೆಯ ವೈದ್ಯಾಧಿಕಾರಿ ಮಿರ್ಜಾ ವಾಸಿಂ, ಆನೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿದರು. ಆನೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಖಚಿತಪಡಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.

ವಕ್ರದಂತದಿಂದ ತೊಂದರೆ : ಬಿಳಿಗಿರಿರಂಗನಬೆಟ್ಟದಲ್ಲಿ ಕಳೆದ ಹಲವು ತಿಂಗಳಿಂದ ಸುತ್ತಮುತ್ತಲ್ಲಿನ ಜನವಸತಿ ಪ್ರದೇಶದಲ್ಲಿ ಈ ಆನೆ ಕಂಡು ಬರುತ್ತಿತ್ತು. ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಪೋಡುಗಳಾದ ಯರಕನಗದೆ, ಬಂಗ್ಲೆಪೋಡು, ಹೊಸಪೋಡು, ಮುತ್ತುಗದ್ದೆಪೋಡು, ಸೀಗೆಬೆಟ್ಟ, ಕಲ್ಯಾಣಿಪೋಡು, ಮಂಜುಗುಂಡಿ ಪೋಡು ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸುತ್ತಿತ್ತು.

ಆನೆಯ ಸೊಂಡಿಲ ಬದಿಯಲ್ಲಿದ್ದ ಎರಡೂ ದಂತಗಳು ವಕ್ರವಾಗಿದ್ದವು. ಇವು ಆಹಾರ ತಿನ್ನಲು ಅಡ್ಡ ಬರುತ್ತಿದ್ದ ಪರಿಣಾಮ ಆಹಾರ ತಿನ್ನಲು ಆನೆಗೆ ತೊಂದರೆಯಾಗಿತ್ತು. ಹಾಗಾಗಿಯೇ ಇದು ಜನವಸತಿ ಪ್ರದೇಶಗಳಲ್ಲಿ ಸುಲಭವಾಗಿ ಸಿಗುವ ಆಹಾರವನ್ನು ಹುಡುಕಿಕೊಂಡು ಬರುತ್ತಿತ್ತು.

ಇತ್ತೀಚೆಗೆ ಬೆಟ್ಟದ ಕಮರಿ ಮೇಲಿರುವ ತಡೆಗೋಡೆಯನ್ನು ಮುರಿದು ಹಾಕಿತ್ತು. ಬಂಗ್ಲೆಪೋಡಿನ ಬಳಿ ಕೆಸ್ಸಾರ್ಟಿಸಿ ಬಸ್‌ನ ಮೇಲೂ ದಾಳಿ ನಡೆಸಲು ಯತ್ನಿಸಿತ್ತು. ಇಲ್ಲಿನ ರೈತರು ಬೆಳೆಯುತ್ತಿದ್ದ ಬಾಳೆ, ಹಲಸು ಇದಕ್ಕೆ ಆಹಾರವಾಗುತ್ತಿತ್ತು. ಬಂಡೀಪುರದಲ್ಲಿ ಭೋಗೇಶ್ವರ ಆನೆಗೆ ದಂತವನ್ನು ಕತ್ತರಿಸಿದ ಹಾಗೇ ಇದಕ್ಕೂ ದಂತವನ್ನು ಕತ್ತರಿಸಿ ಆಹಾರ ಸೇವನೆ ಸುಲಭವಾಗುವಂತೆ ಮಾಡಬೇಕು ಎಂಬುದು ವನ್ಯಪ್ರಿಯರ ಬೇಡಿಕೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net