ಅನಾರೋಗ್ಯದಿಂದ ಕಾಡಾನೆ ಸಾವು

3skpp1 kadane death
Published on


ಸಕಲೇಶಪುರ : ತಾಲೂಕಿನ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಲಾ ಬೆಟ್ಟ ಸಮೀಪದ ಕಡ್ರಳ್ಳಿ ಗ್ರಾಮದ ಸಮೀಪ ಕಳೆದ ಮೂರು ದಿನಗಳಿಂದ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಹೆಣ್ಣಾನೆ ಗುರುವಾರ ಮೃತಪಟ್ಟಿದೆ.


ಸುಮಾರು 22 ವರ್ಷದ ಈ ಆನೆ ಕಳೆದ ಮೂರು ತಿಂಗಳಿನಿಂದ ಆನೆಗುಂಡಿ, ಪಟ್ಲಬೆಟ್ಟ, ಬೆಟ್ಟದಮನೆ, ವನಗೂರು, ಕಡ್ರಹಳ್ಳಿ, ಬಿಸ್ಲೆ, ಮಾಗೇರಿ ಸುತ್ತಮುತ್ತ ಸಂಚಾರ ಮಾಡುತ್ತಿತ್ತು. ಕಳೆದ 2 ತಿಂಗಳಿನಿಂದ ಕಡ್ರಳ್ಳಿ ಸುತ್ತಮುತ್ತ ರೈತರ ಕಾಫಿ ತೋಟ, ಗದ್ದೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಕೆಲವು ದಿನಗಳಿಂದ ಆನೆಗಳ ಗುಂಪಿನಿಂದ ಬೇರ್ಪಟ್ಟು ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಒಂದು ವಾರದ ಹಿಂದೆ ಕಡ್ರಳ್ಳಿ ಗ್ರಾಮದ ಅವಿನಾಶ್ ಎಂಬುವರು ವಾಹನದಲ್ಲಿ ಹೋಗುವಾಗ ರಸ್ತೆಗೆ ಅಡ್ಡಲಾಗಿ ನಿಂತು ತನ್ನ ಅಸಹಾಯಕತೆಯನ್ನು ತೋರ್ಪಡಿಸಿತ್ತು.


ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಯ ಅನಾರೋಗ್ಯದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಚಿಕಿತ್ಸೆಗಾಗಿ ಕಾಡಾನೆಯನ್ನು ಸ್ಥಳಾಂತರ ಮಾಡಿದರೆ ಹೃದಯಾಘಾತವಾಗುವ ಸಂಭವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ಆದರೆ 3 ದಿನದಿಂದ ಆಹಾರ ತ್ಯಜಿಸಿತ್ತು ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net