

* ಯಾರೂ ನುಸುಳದಂತೆ ಕಾವಲು ಗೋಪುರ ನಿರ್ಮಾಣ
* ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲು ಎತ್ತರದ ಪ್ರದೇಶಲ್ಲೇ ಗುಡಿಸಲು ನಿರ್ಮಾಣ
ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಕಾಡ ಎಂಬ ವ್ಯಕ್ತಿಯಿಂದ ಸುಂದರ ಪ್ರಕೃತಿ ವನಸಿರಿ ಮಧ್ಯೆ ಉದಯವಾಗಿ ಗಡಿಯಂಚಿನ ಗ್ರಾಮವಾದರೂ ಜಿಲ್ಲೆಯಲ್ಲೆಡೆ ತನ್ನ ಹೆಸರನ್ನು ಪಸರಿಸಿ, ಕಾಡನಕುಪ್ಪಿ ಇಂದು ಕಾಡನಕುಪ್ಪೆಯಾಗಿದೆ.
ಕಾಡನಕುಪ್ಪೆ ಗ್ರಾಮ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಗಡಿಯಂಚಿನ ಗ್ರಾಮವಾಗಿದೆ. ತೆಂಗಿನಕಲ್ಲು ಅರಣ್ಯ ಪ್ರದೇಶದ ಮಗ್ಗುಲಲ್ಲೇ ಸುತ್ತಲೂ ಬೆಟ್ಟ ಗುಡ್ಡಗಳ ಸಾಲಿನಲ್ಲಿ ಸುಂದರ ಪ್ರಕೃತಿ ವನಸಿರಿ ಮಧ್ಯೆ ಇದೆ.
ಗ್ರಾಮ ಎತ್ತರ ಪ್ರದೇಶದಲ್ಲಿದ್ದು, ಒಂದು ಕಾಲದಲ್ಲಿ ತೆಂಗಿನಕಲ್ಲು ರಾಜ ಈ ಪ್ರದೇಶ ಆಳುತ್ತಿದ್ದ ಎಂದು ಹೇಳಲಾಗಿದೆ. ಆಡಳಿತ ಅವಧಿಯಲ್ಲಿ ಗ್ರಾಮದಲ್ಲಿ ಕಾವಲು ಗೋಪುರ ನಿರ್ಮಾಣ ಮಾಡಿ ತನ್ನ ಆಡಳಿತ ರಾಜಧಾನಿಯೊಳಗೆ ಯಾರೂ ನುಸುಳದಂತೆ ಎಚ್ಚರವಹಿಸುತ್ತಿದ್ದ ಸ್ಥಳ ಇದಾಗಿತ್ತು ಎನ್ನಲಾಗಿದೆ. ರಾಮನಗರ ಜಿಲ್ಲಾ ಕೇಂದ್ರದಿಂದ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು 15 ಕಿ.ಮೀ. ಅಂತರದಲ್ಲಿದೆ. ಗ್ರಾಮದಲ್ಲಿ ಹೆಚ್ಚಿನ ಜನರು ವ್ಯವಸಾಯ ನಂಬಿದ್ದು ರೇಷ್ಮೆ, ಮಾವು ಬೆಳೆಗಾರರಿದ್ದಾರೆ. 1 ರಿಂದ 5 ನೇ ತರಗತಿವರೆಗೆ ಸರ್ಕಾರಿ ಶಾಲೆ, ಹಾಲಿನ ಡೇರಿ ಇದೆ. ಇತ್ತೀಚೆಗೆ ಗ್ರಾಮ ಹೈನುಗಾರಿಕೆ ಅವಲಂಬಿಸಿದೆ.
ಒಕ್ಕಲಿಗ ಜನಾಂಗದ ಕಾಡ ಎಂಬ ವ್ಯಕ್ತಿ ಕೊಳ್ಳೇಗಾಲ ಕಡೆಯಿಂದ ವಲಸೆ ಬಂದು ಕಾಡನಕುಪ್ಪೆ ಪಕ್ಕದ ಹೊಸದೊಡ್ಡಿ ಗ್ರಾಮದಲ್ಲಿ ಮೊದಲು ನೆಲೆ ನಿಲ್ಲುತ್ತಾನೆ. ಕಾಡನಕುಪ್ಪೆ ಎತ್ತರ ಪ್ರದೇಶದಲ್ಲಿದ್ದು, ಅರಣ್ಯ ಪ್ರದೇಶವಾಗಿತ್ತಂತೆ. ಅರಣ್ಯಕ್ಕೆ ಜಾನುವಾರು ಮೇಯಲು ಬಿಡುತ್ತಿದ್ದ ಕಾಡ ಜಾನುವಾರುಗಳು ಹೊಸದೊಡ್ಡಿಗೆ ಬರುವ ಸಮಯದಲ್ಲಿ ಕಾಡು ಪ್ರಾಣಿಗಳು ಹೊತ್ತೊಯ್ಯುತ್ತಿದ್ದವಂತೆ. ಆಗ ಕಾಡ ಹೊಸದೊಡ್ಡಿಯಿಂದ ಅಣ್ಣತಮ್ಮಂದಿರು, ಸಂಸಾರ ಸಮೇತ ಎತ್ತರದ ಪ್ರದೇಶಲ್ಲೇ ಗುಡಿಸಲು ನಿರ್ಮಾಣ ಮಾಡಿ ಅಲ್ಲೇ ಜಾನುವಾರು ಕೊಪ್ಪಲು ನಿರ್ಮಾಣ ಮಾಡಿ ವಾಸ ಮಾಡಲು ಮುಂದಾಗುತ್ತಾರೆೆ.
ವಾಸ ಸ್ಥಳದಲ್ಲಿ ರಾತ್ರಿ ವೇಳೆ ಹೆಚ್ಚಿನ ಬೆಳಕು ಬರುವಂತೆ ದೀಪ (ಕುಪ್ಪಿ) ಹಚ್ಚುತ್ತಿದ್ದರು. ಆ ಬೆಳಕು ಸುತ್ತಮುತ್ತಲ ಪ್ರದೇಶಕ್ಕೆ ಕಾಣಿಸುತ್ತಿತ್ತಂತೆ. ಕಾಡನ ಹೆಸರು ಪ್ರಚಲಿತದಲ್ಲಿದ್ದ ಕಾರಣ ದೀಪದ ಬೆಳಕು ಕಂಡಾಗ ಜನರು ಅದು ಕಾಡ ಹಚ್ಚಿರುವ ಕುಪ್ಪಿ ಎಂದು ಹೇಳುತ್ತಿದ್ದರಂತೆ. ನಂತರ ಅದು ಕಾಡನಕುಪ್ಪಿ ಎಂದು ಬದಲಾಗಿ ಕಾಲಾಂತರದಲ್ಲಿ ಅದು ಕಾಡನಕುಪ್ಪೆ ಎಂಬುದಾಗಿ ಜನಮಾನಸಲ್ಲಿ ಕರೆಯಲ್ಪಟ್ಟಿದೆ ಎಂಬುದು ಗ್ರಾಮದ ಹಿರಿಯರ ಮಾತಾಗಿದೆ.
ಚನ್ನಪಟ್ಟಣ ತಾಲೂಕಿನ ಮಂಗಳವಾರಪೇಟೆ, ಸಿಂಗರಾಜಿಪುರ, ಬಿ.ವಿ. ಹಳ್ಳಿ ಭಾಗಗಳಿಂದ ಜನರು ಬಂದು ಕಾಡನಕುಪ್ಪೆಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈಗಲೂ ಹೆಚ್ಚಿನ ಕಾಡನ ಕುಟುಂಬಸ್ಥರು ಇದ್ದಾರೆ. ಗ್ರಾಮದಲ್ಲಿ ಒಕ್ಕಲಿಗ ಮತ್ತು ಇರುಳಿಗರು ಮಾತ್ರ ಇದ್ದಾರೆ.
ಏಳು ಬಸವೇಶ್ವರ, ಪಾರ್ವತಮ್ಮ ಮತ್ತೊಂದು ವಿಶೇಷ ದೇವಾಲಯವಿದ್ದು, ಋಷಿಮುನಿಗಳು ತಪಸ್ಸು ಮಾಡಿದ್ದ ಸ್ಥಳ ಎಂದು ಕರೆಯಲ್ಪಡುವ ಗವಿಯಲ್ಲಿ ಲ್ಮದೇವಿ ಹೆಸರಿನಲ್ಲಿ ದೇವಾಲಯ ನಿರ್ಮಾಣ ಮಾಡಿ ಪೂಜೆ ಮಾಡುತ್ತಾ ಬರಲಾಗಿದೆ.
ಕಾಡನಕುಪ್ಪೆ ಎತ್ತರ ಪ್ರದೇಶದಲ್ಲಿರುವ ಕಾರಣ ನೀರು ಗ್ರಾಮದಲ್ಲಿ ಸಿಗುತ್ತಿರಲಿಲ್ಲ. ಗ್ರಾಮದ ಕೆಳಭಾಗದಲ್ಲಿ ಬಾಳೇಹಳ್ಳ ಬಾವಿ ಜನರ ಸ್ನಾನ, ಕುಡಿಯುವ ನೀರಿನ ಬವಣೆ ನೀಗಿಸಿತ್ತು. ಜನರು ಬಾವಿ ಹತ್ತಿರವೇ ನೀರು ಕಾಯಿಸಿ ಸ್ನಾನ ಮಾಡುತ್ತಿದ್ದರಂತೆ. 1934ರಲ್ಲಿ ಕಲ್ಲಿನ ಹೊಸ ಬಾವಿ ನಿರ್ಮಾಣ ಮಾಡಲಾಗಿದ್ದು, ಆ ಬಾವಿ ಇನ್ನೂ ಗ್ರಾಮದ ಹೊರಭಾಗದಲ್ಲಿ ಸುಭದ್ರವಾಗಿ ನಿಂತಿದೆ. ಗ್ರಾಮದಲ್ಲಿ ಓವರ್ಹೆಡ್ ಟ್ಯಾಂಕ್ ಮೂಲಕ ಗ್ರಾಪಂ ನೀರು ನೀಡಲಾಗುತ್ತಿದೆ. ಗೆಂಡೆಕೆರೆ, ಚನ್ನಯ್ಯನಕಟ್ಟೆ ಕೆರೆಗಳಿವೆ.
ಗ್ರಾಮದಲ್ಲಿ ಹಳ್ಳಿಕಾರ್ ನಾಟಿ ಹಸುಗಳನ್ನು ಹೆಚ್ಚಾಗಿ ಸಾಕುತ್ತಿದ್ದು 10, 15, 20 ಈ ರೀತಿ ಹಸುಗಳನ್ನು ಒಬೊಬ್ಬ ರೈತರು ಸಾಕುತ್ತಿದ್ದಾರೆ. ನೂರಾರು ನಾಟಿ ಹಸುಗಳು ಗ್ರಾಮದಲ್ಲಿವೆ. ತೆಂಗಿನಕಲ್ಲು ಅರಣ್ಯ ಪಕ್ಕದಲ್ಲಿರುವ ಕಾರಣ ಆನೆಗಳು ಗ್ರಾಮದ ಕೃಷಿಕರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಪ್ರತಿನಿತ್ಯ ಆನೆಗಳ ಕಾಟವಿದೆ.
ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಬನ್ನಿಕುಪ್ಪೆ ಗ್ರಾಪಂ ನರೇಗಾ ಸೇರಿ ಇತರ ಹಣಕಾಸು ಯೋಜನೆಯಲ್ಲಿ ಒಂದಷ್ಟು ಅಭಿವೃದ್ಧಿ ಮಾಡಿದೆ. ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣವಾಗಿದ್ದರೂ ಇನ್ನೂ ಎರಡೂ ಬೀದಿ ರಸ್ತೆ ಅಭಿವೃದ್ಧಿ ಆಗಬೇಕು. ವೈಜ್ಞಾನಿಕ ಚರಂಡಿ ನಿರ್ಮಾಣ ಆಗಬೇಕಿದೆ. ಕೃಷಿಕರಿಗೆ ವರದಾನವಾಗುವ ಕೆರೆ ತುಂಬಿಸುವ ಕೆಲಸ ಆಗಬೇಕಿದೆ ಸಿದ್ದೇಗೌಡ, ಗ್ರಾಮಸ್ಥಕಾಡನಕುಪ್ಪೆ ಗ್ರಾಮದ ಜನರ ಹೃದಯ ವಿಶಾಲವಾಗಿದ್ದು, ಎಲ್ಲರೂ ಅನ್ಯೋನ್ಯತೆಯಿಂದ ಯಾವುದೇ ದ್ವೇಷ ಅಸೂಯೆ ಇಲ್ಲದೆ ಜೀವನ ನಡೆಸುತ್ತಾ ಬಂದಿದ್ದೇವೆ. ಕಾಡ ಎಂಬ ನಮ್ಮ ಹಿರಿಯರು ಕಟ್ಟಿದ ಈ ಪುಣ್ಯದ ನಾಡಿನಲ್ಲಿ ಜನ್ಮ ತಾಳಿ ನಾವು ಜೀವನ ನಡೆಸುತ್ತಿರುವುದೇ ನಮ್ಮ ಸೌಭಾಗ್ಯ.> ರಾಘವೇಂದ್ರ, ರಾಮನಗರ ಪ್ರಾಧಿಕಾರ ಮಾಜಿ ನಿರ್ದೇಶಕ, ಕಾಡನಕುಪ್ಪೆ.ಗ್ರಾಪಂ ವತಿಯಿಂದ ಕುಡಿಯುವ ನೀರು, ಮೂಲ ಸೌಲಭ್ಯ ಒದಗಿಸಲಾಗಿದೆ. ನರೇಗಾ ಸೇರಿ ಗ್ರಾಪಂ ಹಣಕಾಸು ಮೂಲದಲ್ಲಿ ಗ್ರಾಮದ ಕೆರೆ ಕಟ್ಟೆಗಳು, ನಾಲಾ, ಸೇರಿ ಗ್ರಾಮದ ಅಭಿವೃದ್ಧಿ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಗ್ರಾಮಕ್ಕೆ ಬೇಕಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.> ಜ್ಯೋತಿ ರುದ್ರಪ್ಪ, ಬನ್ನಿಕುಪ್ಪೆ, ಗ್ರಾಪಂ ಉಪಾಧ್ಯಕ್ಷರು, ಕಾಡನಕುಪ್ಪೆ.