ಕಳೆದ ವರ್ಷ ಕದಂಬೋತ್ಸವದ 36 ಲಕ್ಷ ರೂ. ಬಿಲ್‌ ಬಾಕಿ

Kadambotsava
Published on

ಕಾರವಾರ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವಕ್ಕೆ ಸಿದ್ಧತೆ ಏಪ್ರಿಲ್ 12 ಹಾಗೂ 13 ರಂದು ದಿನಾಂಕ ನಿಗದಿ ಮಾಡಲಾಗಿದೆ. ಆದರೆ, ಜಿಲ್ಲಾಡಳಿತಕ್ಕೆ ಈಗ ಹಳೆಯ ಬಿಲ್ಲಿನ ಮೊತ್ತ ಪಾವತಿ ತಲೆಬಿಸಿಗೆ ಕಾರಣವಾಗಿದೆ. 2024 ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ಕದಂಬೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಿದ್ದರು. ಹೆಸರಾಂತ ಕಲಾವಿದ ರಘು ಧೀಕ್ಷಿತ್‌, ಕಿರುತೆರೆಯ ಗಿಚ್ಚಿ ಗಿಲಿಲಿ ತಂಡ ಸೇರಿ ಹಲವು ಪ್ರಸಿದ್ಧ ಕಿರುತೆರೆ, ಹಿರಿತೆರೆ ಕಲಾವಿದೆ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರನ್ನು ಸಂಪರ್ಕಿಸಿ, ಅವರನ್ನು ಕರೆತಂದು ಕಾರ್ಯಕ್ರಮ ಕೊಡಲು ರಾಜ್ ಈವೆಂಟ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು ಎನ್ನಲಾಗಿದೆ. ಒಟ್ಟಾರೆ 36 ಲಕ್ಷ ರೂ. ಬಿಲ್ ಆಗಿದ್ದು, ಆದರೆ, ಇದುವರೆಗೂ ಹಣ ಪಾವತಿಯಾಗಿಲ್ಲ ಎಂದು ರಾಜ್ ಈವೆಂಟ್‌ನ ಕಾರ್ಯಕ್ರಮ ಆಯೋಜಕ ಸಿದ್ದರಾಜು ತಿಳಿಸಿದ್ದಾರೆ. ಬಿಲ್ ಆಗದ ಬಗ್ಗೆ ಸುಮಾರು 15 ಬಾರಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಆದರೆ, ಬಿಲ್ ಪಾವತಿ ಆಗಿಲ್ಲ ಎಂದು ಅವರು ದೂರಿದ್ದಾರೆ. ಬುಧವಾರ ನಗರದಲ್ಲಿ ಎಸ್‌ಪಿ ಕಚೇರಿಯಲ್ಲಿ ಆಯೋಜನೆಯಾಗಿದ್ದ ಗೃಹ ಸಚಿವ ಜಿ.ಪರಮೇಶ್ವರ ಅವರ ಕಾರ್ಯಕ್ರಮದ ಸಮಯದಲ್ಲಿ ಅವರು ಶಾಸಕರನ್ನು ಸಚಿವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದ್ದಾರೆ. ಅನುಮಾನ: ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಿಂದ ದರಪಟ್ಟಿ ಪಡೆದು, ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಅವರಿಗೆ ಕಾರ್ಯಾದೇಶ ನೀಡಿಲ್ಲ. ಕಂಪನಿಯ ಕೊಟೇಶನ್‌ಗೂ ಕಂಪನಿಯ ಬಿಲ್‌ಗೂ ವ್ಯತ್ಯಾಸ ಕಾಣಿಸುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವಧಿಯಲ್ಲಿ ಕದಂಬೋತ್ಸವ ನಡೆದಿತ್ತು. ಆದರೆ, ನಂತರ ಅವರು ವರ್ಗಾವಣೆಯಾಗಿದ್ದಾರೆ. ದಾಖಲೆಗಳು ಸರಿ ಇಲ್ಲದ ಕಾರಣ ಈಗಿನ ಜಿಲ್ಲಾಧಿಕಾರಿ ಅವರು ಬಿಲ್ ಪಾವತಿಗೆ ನಿರಾಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. ರಾಜ್ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನೀಡಿದ ಬಿಲ್ ದಾಖಲೆಗಳಲ್ಲಿ ಅವರಿಗೆ ಜವಾಬ್ದಾರಿ ವಹಿಸಿದ ಬಗ್ಗೆ ಕಾರ್ಯಾದೇಶ ಪ್ರತಿ ಇಲ್ಲ. ಇದರಿಂದ ಬಿಲ್ ಪಾವತಿಯಾಗಿಲ್ಲ. ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾಧಿಕಾರಿ, ಉತ್ತರ ಕನ್ನಡ  ಸಚಿವ ಮಂಕಾಳ ವೈದ್ಯ ಅವರ ಗಮನಕ್ಕೂ ತಂದಿದ್ದೇವೆ. ಬಿಲ್ ಕೊಡಿಸುವ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ನ್ಯಾಯಾಲಯಕ್ಕೆ ಹೋಗದಂತೆ ರಾಜ್ ಈವೆಂಟ್‌ನವರಿಗೆ ಮನವಿ ಮಾಡಿದ್ದೇವೆ. ಸತೀಶ ಸೈಲ್ ಕೆಎಸ್‌ಎಂಸಿಎ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net