ಸರೋಜಿನಿ ಮಹಿಷಿ ವರದಿ ಅಂಗೀಕರಿಸಿ: ಕದಂಬ ಸೈನ್ಯದಿಂದ ಪ್ರತಿಭಟನೆ

Kadamba Sene Protest mandya
Published on

ಮಂಡ್ಯ: ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಯಥಾವತ್ತಾಗಿ ಕಾಯ್ದೆಯಾಗಿ ರೂಪಿಸಿ ವಿಧಾನಮಂಡಲದ ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸೋಮವಾರ ನಗರದಲ್ಲಿ ಕದಂಬ ಸೈನ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಎಸ್.ಡಿ.ಜಯರಾಂ(ನಂದಾ) ವೃತ್ತದಲ್ಲಿ ಇಮ್ಮಡಿ ಪುಲಕೇಶಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರತಿಭಟನೆ ನಡೆಸಿದರು. ಕನ್ನಡಿಗರ ಉದ್ಯೋಗದಾತೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು 2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಮಂತ್ರಿಗೆ ಸಲ್ಲಿಸಿತು. ಆದರೆ ಇದುವರೆಗೂ ವರದಿಯನ್ನು ಕಾಯ್ದೆಯಾಗಿ ಜಾರಿಗೆ ತರಲಿಲ್ಲ. ಇದರಿಂದ ಕನ್ನಡಿಗರು ಉದ್ಯೋಗದಲ್ಲಿ ಸಾಕಷ್ಟು ವಂಚಿತರಾಗಿ ಸಂಕಷ್ಟದಲ್ಲಿದ್ದಾರೆ ಎಂದರು.

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಜಾರಿ ಮಾಡಿರುವುದನ್ನು ಕಾಯ್ದೆಯಾಗಿ ರೂಪಿಸಬೇಕು. ಕನ್ನಡ ನಾಡಿನಲ್ಲಿ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕು. ರಾಜ್ಯದ ಮೇಲೆ ಹಿಂದಿ ಹೇರಿಕೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಮುಂದಾಗಬೇಕು. ಹಿಂದಿ ಹೇರಿಕೆ ಕನ್ನಡ ಭಾಷೆಗೆ ಮಾರಕವಾಗಿದೆ. ಬಹುಜನರು ಮಾತನಾಡುತ್ತಾರೆಂದು ಹಿಂದಿ ಹೇರಿಕೆ ಮಾಡಬಾರದು. ಒಕ್ಕೂಟ ರಾಷ್ಟ್ರದಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರ ಇದೆ. ಕನ್ನಡ ನಾಡಿಗೆ ಏಕೆ ಮಲತಾಯಿ ಧೋರಣೆ, ತ್ರಿಭಾಷಾ ಸೂತ್ರ ಬೇಡವೇ ಬೇಡ ಎಂದು ಆಗ್ರಹಿಸಿದರು.

ಇನ್ನು ವಿಧಾನಸೌಧದ ಎದುರು ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಮ್ಮಡಿ ಪುಲಕೇಶಿ ಪ್ರತಿಮೆ ಪ್ರತಿಷ್ಠಾಪಿಸಬೇಕು. ಕನ್ನಡಿಗರ ಪ್ರಥಮ ಚಕ್ರವರ್ತಿ ಕದಂಬ ಮಯೂರವರ್ಮ ಪುತ್ಥಳಿಯನ್ನು ಬನವಾಸಿ ಮಧುಕೇಶ್ವರ ದೇವಸ್ಥಾನದ ಎದುರು ಹಾಗೂ ಶಿರಸಿ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೈನ್ಯದ ಸಂಸ್ಥಾಪಕ ಬೇಕ್ರಿ ರಮೇಶ್, ಅಂದಾನಿ ಸೋಮನಹಳ್ಳಿ, ಪುಟ್ಟಂಕಯ್ಯ, ದೇವನಹಳ್ಳಿ ದೇವರಾಜ್, ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಚಿಕ್ಕವೆಂಕಟಪ್ಪ ರಾಮು, ಜೋಸೆಫ್, ರಾಮಕೃಷ್ಣ, ಆರಾಧ್ಯ ಗುಡಿಗೇನಹಳ್ಳಿ, ಥಾಮಸ್ ಬೆಂಜಮಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net