

ಮಂಡ್ಯ: ಚಕ್ರವರ್ತಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮತ್ತು ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ಅಥವಾ ಪುತ್ಥಳಿ ಸ್ಥಾಪನೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಮಾರ್ಚ್ ಮೊದಲ ವಾರದಿಂದ ಕರಪತ್ರ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಕದಂಬ ಸೈನ್ಯದ ಸಂಸ್ಥಾಪಕ ಬೇಕ್ರಿ ರಮೇಶ್ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದ ಎದುರು ಹಾಗೂ ಬಾದಾಮಿಯಲ್ಲಿ ಇಬ್ಬರು ಮಹಾನ್ ನಾಯಕರ ಪ್ರತಿಮೆ ಅಥವಾ ಪುತ್ಥಳಿ ಸ್ಥಾಪಿಸಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಆದರೆ, ಸರ್ಕಾರ ಮಾತ್ರ ನಿರ್ಲಕ್ಷೃ ವಹಿಸಿದೆ. ಆದ್ದರಿಂದ ಜನರನ್ನು ಜಾಗೃತಗೊಳಿಸಲು ಜನಾಂದೋಲನ ರೂಪಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿಮೆಗಳ ಸ್ಥಾಪನೆಗೆ ಒತ್ತಾಯಿಸಿ ನಾವು ಬರೆದ ಪತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂತರು, ಶರಣರು, ಜನನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯ ವ್ಯಕ್ತಿಗಳ ಪ್ರತಿಮೆ/ಸ್ಮಾರಕಗಳ ಸ್ಥಾಪನೆಯನ್ನು ನಿರ್ಬಂಧಿಸಲಾಗಿದೆ ಎಂದು ಪ್ರತಿಕ್ರಿಯಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ, ಪುತ್ಥಳಿಗಳ ಸ್ಥಾಪನೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ಬೇರೆಯವರ ಪ್ರತಿಮೆಗಳಿಗೆ ಏಕೆ ನಿರ್ಬಂಧ. ಮರಾಠಿಗರ ಮತಕ್ಕಾಗಿ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದು ನಾಡನ್ನು ಒಡೆಯುವ ಸಂಚು. ನಮ್ಮನ್ನಾಳುವ ಜನಪ್ರತಿನಿಧಿಗಳು ಮರಾಠಿಗರ ಗುಲಾಮರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಸದಸ್ಯ ಮೈಸೂರು ಮಹದೇವಸ್ವಾಮಿ, ಗುಡಿಗೇಡಿನಹಳ್ಳಿ ಆರಾಧ್ಯ, ರಾಮು, ಥಾಮಸ್ ಬೆಂಜಮಿನ್ ಕಿಟ್ಟಿ, ಕೃಷ್ಣ ಹಾಜರಿದ್ದರು.