ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಕೈಬಿಡಿ: ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹ

Kadamba Sene press conference Mandya
Published on

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ಉದ್ಯಾನ ನಿರ್ಮಾಣ ಹಾಗೂ ಕಾವೇರಿ ಆರತಿಗೆ ರೈತ, ಜನಪರ, ಪ್ರಗತಿಪರ ಸಂಘಟನೆಗಳ ತೀವ್ರ ವಿರೋಧವಿದೆ. ಆದ್ದರಿಂದ ಈ ಯೋಜನೆಯನ್ನು ಕೈಬಿಟ್ಟು ಕನ್ನಂಬಾಡಿ ಕಟ್ಟೆಗೆ ಧಕ್ಕೆ ತರುವ ಕೆಲಸದಿಂದ ರಾಜ್ಯ ಸರ್ಕಾರ ದೂರ ಸರಿಯಬೇಕು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.

ಜಿಲ್ಲೆಯ ರೈತರಿಗೆ ಅನುಕೂಲ ಮಾಡಲು ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಅದನ್ನು ಬಿಟ್ಟು ಬೆಂಗಳೂರು, ತಮಿಳುನಾಡಿಗೆ ನೀರು ಬಿಡುಗಡೆ ಮಾತ್ರವಲ್ಲ. ಬೃಹತ್ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಮಂಡ್ಯ ಜನತೆಯ ಬದುಕು ಬಲಿ ಕೊಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ರಾಜ್ಯಸರ್ಕಾರಕ್ಕೆ ನಿಜಕ್ಕೂ ಇಚ್ಛಾಸಕ್ತಿ ಇದ್ದರೆ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ಶಿವನಸಮುದ್ರ ಬಳಿ ಮಾಡಲಿ ಹಾಗೂ ಕಾವೇರಿ ಆರತಿಯನ್ನು ಶ್ರೀರಂಗಪಟ್ಟಣದ ಸ್ನಾನ ಘಟ್ಟದಲ್ಲಿ ಮಾಡಲಿ. ಅದನ್ನು ಬಿಟ್ಟು ಡ್ಯಾಂಗೆ ಅಪಾಯವಾಗುವಂತಹ ಯಾವುದೇ ಯೋಜನೆ ಬೇಡ ಎಂದು ಒತ್ತಾಯಿಸಿದರು.

ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ ತರುವಲ್ಲಿ ಯಶಸ್ವಿಯಾದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಅಭಿನಂದಿಸಲಾಗುವುದು. ವಿವಿಗೆ ಸಂಬಂಧಿಸಿದಂತೆ ವಿಧೇಯಕ ಮಂಡಿಸಿ ಎರಡು ಸದನದಲ್ಲಿ ಅಂಗೀಕಾರ ಪಡೆಯುವುದರ ಜತೆಗೆ ರಾಜ್ಯಪಾಲರ ಅಂಕಿತ ಪಡೆಯುವಲ್ಲಿ ಶ್ರಮಿಸಿದ್ದಾರೆ. ಮಾತ್ರವಲ್ಲದೆ 25 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಅವರನ್ನು ಅಭಿನಂದಿಸಿ ಇಂತಹ ಜನಪರ ಯೋಜನೆ ಇನ್ನಷ್ಟು ಜಾರಿಗೊಳಿಸಲು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ, ಕದಸಂಸ ಜಿಲ್ಲಾ ಸಂಚಾಲಕ ಮೋಹನ್ ಚಿಕ್ಕಮಂಡ್ಯ, ಕದಂಬ ಸೈನ್ಯ ಜಿಲ್ಲಾ ಸಂಚಾಲಕ ಸಲ್ಮಾನ್, ಉಮ್ಮಡಹಳ್ಳಿ ನಾಗೇಶ್, ಬಸವರಾಜು, ಕಲ್ಲೇಶ್ ಹಟ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net