ಆ.30ರಂದು ನಗರದಲ್ಲಿ ಪ್ರತಿಭಟನೆ: ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್‌ಮಾಹಿತಿ

Kadamba Sene press conference Mandya
Published on

ಮಂಡ್ಯ: ಡಾ.ಸರೋಜಿನಿ ಮಹಿಷಿ ಪರಿಷ್ಕೃತ 2017ರ ವರದಿಯನ್ನು ಕಾಯ್ದೆಯಾಗಿ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.30ರಂದು ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಹೇಳಿದರು.

ಈವರೆಗೆ ಅಧಿಕಾರ ನಡೆಸಿದ ಸರ್ಕಾರಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಸಾಂವಿಧಾನಿಕ ಕಾನೂನಾಗಿ ರೂಪಿಸಿ ವಿಧಾನ ಮಂಡಲದಲ್ಲಿ ಕಾಯ್ದೆಯಾಗಿ ರೂಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲು ತೀಮಾರ್ನಿಸಲಾಗಿದ್ದು, ಅದರಂತೆ ಮಂಡ್ಯದಿಂದಲೇ ಚಾಲನೆ ಸಿಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿಂದಿ ಹೇರಿಕೆ ವಿರುದ್ಧ ರಾಜ್ಯಸರ್ಕಾರ ಈವರೆಗೆ ಧ್ವನಿ ಎತ್ತಲೇ ಇಲ್ಲ. ನಮಗೆ ತ್ರಿಭಾಷೆ ಸೂತ್ರಬೇಡ, ಬದಲಿಗೆ ದ್ವಿಭಾಷೆ ಸೂತ್ರ ಬೇಕೇಬೇಕು. ರಾಜ್ಯಕ್ಕೆ ಬರುತ್ತಿರುವ ವಲಸಿಗರನ್ನು ತಡೆಯುವ ಮೂಲಕ ಕನ್ನಡಿಗರು ಮತ್ತು ಕನ್ನಡ ವ್ಯಾಪಾರಿಗಳನ್ನೇ ಪ್ರೋತ್ಸಾಹಿಸಬೇಕು. ಗದಗ ಜಿಲ್ಲೆ ಕಪ್ಪತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಸರ್ಕಾರಿ ಅಧಿಕಾರಿ ಹಾಗೂ ನೌಕರರು, ವಿಶೇಷವಾಗಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತಾಗಬೇಕು. ಕನ್ನಡದ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಿಶೇಷ ಕಾರ್ಯಕ್ರಮ ರೂಪಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.

ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ಸಹಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಸಂಚಾಲಕ ಸಲ್ಮಾನ್, ರಾಜ್ಯ ಸಮಿತಿ ಸದಸ್ಯ ಆರಾಧ್ಯ ಗುಡಿಗೇನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net