ವಲಸಿಗರನ್ನು ತಡೆಯದಿದ್ದರೆ ಕನ್ನಡಿಗರಿಗೆ ಸಂಕಷ್ಟ: ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಎಚ್ಚರಿಕೆ

Kadamba Sene Press Conference mandya
Published on

ಮಂಡ್ಯ: ರಾಜ್ಯಸರ್ಕಾರ ಹೊರ ರಾಜ್ಯದ ವಲಸಿಗರನ್ನು ತಡೆಯದಿದ್ದರೆ ಮುಂದೆ ಕನ್ನಡಿಗರು ಭಾರೀ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಎಚ್ಚರಿಸಿದರು.

ಬೆಂಗಳೂರಿನಲ್ಲಿ ಶೇ.50ರಷ್ಟು ವಲಸಿಗರೇ ತುಂಬಿದ್ದು, ಕನ್ನಡಿಗರೇ ಅಲ್ಪಸಂಖ್ಯಾತರಾಗಿದ್ದಾರೆ. ಈಗಿರುವ ವಲಸಿಗರ ಪ್ರಮಾಣ ಇದೇ ರೀತಿ ಮುಂದುವರಿದರೆ ಸಧ್ಯದಲ್ಲೇ ಕನ್ನಡಿಗರು ಮತ್ತು ಕನ್ನಡ ರಾಜಧಾನಿಯಲ್ಲಿ ಹೇಳ ಹೆಸರಿಲ್ಲದಂತಾಗುತ್ತದೆ ಎಂದು ಶುಕ್ರವಾರ ಆತಂಕ ವ್ಯಕ್ತಪಡಿಸಿದರು.

ಕನ್ನಡದ ಪ್ರಪ್ರಥಮ ಚಕ್ರವರ್ತಿ ರಾಜಾ ಮಯೂರವರ್ಮ ಹಾಗೂ ಚಾಲುಕ್ಯ ಪರಮೇಶ್ವರ, ಇಮ್ಮಡಿ ಪುಲಕೇಶಿ ಅವರ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಕರ್ನಾಟಕ ಬಲಂ ಅಜೇಯಂ ಎಂದು ಘರ್ಜಿಸಿದ್ದ ಇಮ್ಮಡಿ ಪುಲಕೇಶಿಯ ಶೌರ್ಯ, ಪರಾಕ್ರಮ ನಮ್ಮ ಮುಂದಿನ ಪೀಳಿಗೆಗೆ ತಿಳಿಯಬೇಕು. ಇಡೀ ದೇಶವನ್ನೇ ಆವರಿಸಿ ಆಳಿದ್ದ ಏಕೈಕ ಕನ್ನಡ ಚಕ್ರವರ್ತಿ ಪುಲಕೇಶಿ ಎಂದರೆ ಇಂದಿನ ತಲೆಮಾರಿನ ಯುವಕರಿಗೆ ತಿಳಿಯದಂತಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ವಹಿಸಬೇಕು. ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಡಾ.ಸರೋಜಿನಿ ಮಹಿಷಿ ಅವರ ಪರಿಷ್ಕೃತ ವರದಿಯನ್ನು ಎರಡೂ ಸದನಗಳಲ್ಲಿ ಮಂಡಿಸಿ ಕಾಯ್ದೆಯಾಗಿ ಜಾರಿಗೊಳಿಸಿದರೆ ಮಾತ್ರ ಕನ್ನಡಿಗರಿಗೆ ಉದ್ಯೋಗದಲ್ಲಿ ಭದ್ರತೆ ಸಿಗಲು ಸಾಧ್ಯ ಎಂದು ಪ್ರತಿಪಾದಿಸಿದರು.

ಕದಂಬ ಸೈನ್ಯದ ಬಿ.ಶಿವರಾಂ, ಶಿವಕುಮಾರ್, ರಾಮಣ್ಣ, ಆರಾಧ್ಯ, ಚಿಕ್ಕವೆಂಕಟಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net