

ಮಂಡ್ಯ: ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲೆಯ ಎಲ್ಲ ಮನೆ, ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ಧ್ವಜವನ್ನು ಕಡ್ಡಾಯವಾಗಿ ಹಾರಾಟ ನಡೆಸಬೇಕು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.
ಕರ್ನಾಟಕದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ ಎಂಬ ಹೆಗ್ಗಳಿಕೆ ಇದೆ. ರಾಜ್ಯೋತ್ಸವ ದಿನದಂದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕನ್ನಡ ಧ್ವಜವನ್ನು ಹಾರಿಸುವುದಕ್ಕೆ ಕನ್ನಡಿಗರೇ ಹಿಂದೇಟು ಹಾಕುತ್ತಿರುವುದು ದುರ್ದೈವದ ಸಂಗತಿ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ನಾಡು-ನುಡಿಗಾಗಿ ಕನ್ನಡಿಗರೇ ಹೋರಾಡುವ ಪರಿಸ್ಥಿತಿಯನ್ನು ಕರ್ನಾಟಕದಲ್ಲಷ್ಟೇ ಕಾಣಬಹುದು. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಭಾಷೆಯ ಉಳಿವಿಗಾಗಿ ಹೋರಾಡುವ ಪರಿಸ್ಥಿತಿ ಇಲ್ಲ. ಕನ್ನಡಿಗರಲ್ಲೇ ಕನ್ನಡಾಭಿಮಾನವಿಲ್ಲದಿರುವ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಕನ್ನಡಿಗರ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು, ಮನೆಗಳೆದುರು ರಾಜ್ಯೋತ್ಸವ ದಿನದಂದು ಕನ್ನಡ ಬಾವುಟ ಹಾರಾಡುವುದೇ ಇಲ್ಲ. ಕನ್ನಡಿಗರಲ್ಲಿ ಭಾಷೆ ಬಗ್ಗೆ ಪ್ರೀತಿ-ಅಭಿಮಾನವಿರಬೇಕು. ಅದೇ ರೀತಿ ಹೊರರಾಜ್ಯದವರು ಈ ನೆಲದ ನೀರು, ಅನ್ನದ ಜತೆಗೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಕನ್ನಡಿಗರೊಂದಿಗೆ ಒಂದಾಗಿದ್ದಾರೆ. ಅವರಲ್ಲೂ ಕನ್ನಡ ಪ್ರೇಮವಿರಬೇಕು. ಹಾಗಾಗಿ ರಾಜ್ಯೋತ್ಸವದ ದಿನ ಒಗ್ಗೂಡಿ ಕನ್ನಡಬಾವುಟ ಹಾರಿಸಬೇಕು. ಕನ್ನಡಿಗರಿಂದ ಬದುಕನ್ನು ಕಟ್ಟಿಕೊಂಡವರು ಕನ್ನಡ ಪ್ರೇಮವನ್ನು ಮೆರೆಯುವುದಕ್ಕೆ ಬಯಸದಿದ್ದರೆ ಅವರು ಈ ನೆಲದಿಂದ ಹೊರಗೆ ಹೋಗುವಂತೆ ಹೇಳಿದರು.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೆಲ್ಲಾ ಕನ್ನಡದ ಹಿರಿಮೆ-ಗರಿಮೆಗಳನ್ನು ಎತ್ತಿಹಿಡಿದು ಭಾಷಾ ಪ್ರೇಮ ಮೆರೆಯುತ್ತಿರುವವರೆಂದರೆ ಆಟೋ ಚಾಲಕರು. ಪ್ರತಿಯೊಂದು ಆಟೋಗಳಿಗೆ ಕನ್ನಡ ಧ್ವಜ ಕಟ್ಟಿಕೊಂಡು ಹಾರಾಟ ನಡೆಸುವ ಮೂಲಕ ಕನ್ನಡದ ಸ್ವಾಭಿಮಾನ ಮೆರೆಯುತ್ತಿದ್ದಾರೆ. ಪ್ರತಿ ಆಟೋ ನಿಲ್ದಾಣಗಳಲ್ಲೂ ರಾಜ್ಯೋತ್ಸವ ಆಚರಿಸುವುದನ್ನು ರೂಢಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ರಾಜ್ಯದೊಳಗೆ ನಾಮಫಲಕದಲ್ಲಿ ಕನ್ನಡ ಶೇ.60ರಷ್ಟು ಬಳಸಬೇಕೆಂಬ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ವಾಣಿಜ್ಯ ವ್ಯವಹಾರ ನಡೆಸುತ್ತಿರುವ ಅಂಗಡಿಗಳು, ಮಾಲ್‌ಗಳು, ಖಾಸಗಿ ಉದ್ಯಮಗಳಿಗೆ ಇದರಿಂದ ಹಿನ್ನಡೆಯಾಗಿದೆ. ಈ ಆದೇಶವನ್ನು ರಾಜ್ಯಸರ್ಕಾರ ಕಟ್ಟುನಿಟ್ಟಾಗಿ ರಾಜ್ಯಾದ್ಯಂತ ಜಾರಿಗೊಳಿಸುವಂತೆ ಆಗ್ರಹಪಡಿಸಿದರು.
ಸೈನ್ಯದ ಉಮ್ಮಡಹಳ್ಳಿ ನಾಗೇಶ್, ಸಲ್ಮಾನ್ ಇತರರಿದ್ದರು.