ಅನಧಿಕೃತ ಕೋಚಿಂಗ್ ಸೆಂಟರ್ ವಿರುದ್ಧ ಕ್ರಮವಾಗಲಿ: ಕದಂಬ ಸೈನ್ಯ ಕಾರ್ಯಕರ್ತರ ಒತ್ತಾಯ

Kadamba Sene appeal Mandya
Published on

ಮಂಡ್ಯ: ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕದಂಬ ಸೈನ್ಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು, ಜಿಲ್ಲಾದ್ಯಂತ ಅನಧಿಕೃತ ಕೋಚಿಂಗ್ ಕೇಂದ್ರಗಳು ಬಹಿರಂಗವಾಗಿ ಪ್ರಕಟಣೆ, ಪ್ಲೆಕ್ಸ್, ಬ್ಯಾನರ್ ಮೂಲಕ ಅತಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಮನ ಬಂದಂತೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾನೂನು ಅನುಮತಿ ಪಡೆಯದೇ ಇರುವ ಸೆಂಟರ್‌ಗಳು ಯಾವುದೇ ಅಧಿಕೃತ ರಸೀದಿ ನೀಡುವುದಿಲ್ಲ. ಮೂಲ ಸೌಕರ್ಯಗಳು ಇಲ್ಲದೆ ಐದನೇ ತರಗತಿಯಿಂದ ಪಿಯುಸಿ ವರೆಗೆ ಹಾಗೂ ಪಿಯುಸಿ ನಂತರ ವಿದ್ಯಾರ್ಥಿಗಳ ಅತಿ ಮುಖ್ಯವಾದ ಘಟ್ಟಕ್ಕೆ ತಲುಪುವ ಇಂಜಿನಿಯರಿಂಗ್ ಮತ್ತು ವೈದ್ಯಕೀಯ, ಇನ್ನಿತರ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆಯೂ ಕೇಂದ್ರಗಳನ್ನು ತೆರೆದಿದ್ದಾರೆ. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳೂ ಮಕ್ಕಳು ಮತ್ತು ಪೋಷಕರಿಂದ ದುಬಾರಿ ಶುಲ್ಕ ಪಡೆಯುತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ, ಶಾಲಾ ಶಿಕ್ಷಣ ಇಲಾಖೆಯವರಿಗೂ ತಿಳಿದಿದ್ದರೂ ವೌನ ವಹಿಸಿದ್ದಾರೆ. ಇದುವರೆಗೆ ಕಾನೂನು ಬಾಹಿರವಾಗಿ ಕೋಚಿಂಗ್ ಸೆಂಟರ್ ನಡೆಯುತ್ತಿದ್ದರೂ ಅವುಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾಧ್ಯಕ್ಷ ಜೋಸೆಫ್ ರಾಮು ಕೀಲಾರ, ಜಿಲ್ಲಾ ಸಂಚಾಲಕ ಸಲ್ಮಾನ್, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ, ಶಿವಣ್ಣ ಹೊಳಲು, ಕದಸಂಸ ಸ್ವಾಭಿಮಾನಿ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಮೋಹನ್ ಚಿಕ್ಕಮಂಡ್ಯ, ಹೆಮ್ಮಿಗೆ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net