

ಮಂಡ್ಯ: ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲು ರಾಜ್ಯಸರ್ಕಾರ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯ್ದೆಯನ್ನಾಗಿ ಜಾರಿಗೊಳಿಸಬೇಕು ಎಂದು ಕದಂಬ ಸೈನ್ಯ ಸಂಸ್ಥಾಪಕ ಬೇಕ್ರಿ ರಮೇಶ್ ಒತ್ತಾಯಿಸಿದರು.
ಈ ವರದಿಯನ್ವಯ ಎ ಮತ್ತು ಬಿ ದರ್ಜೆ ಹುದ್ದೆಯಲ್ಲಿ ಶೇ.60 ಹಾಗೂ ಸಿ ಮತ್ತು ಡಿ ದರ್ಜೆ ಹುದ್ದೆಯಲ್ಲಿ ಶೇ.100ರಷ್ಟು ಉದ್ಯೋಗ ನೀಡಬೇಕು. ಜತೆಗೆ ವರದಿಯಲ್ಲಿರುವಂತೆ 14 ಶಿಫಾರಸನ್ನು ಅನುಷ್ಠಾನಕ್ಕೆ ತರಬೇಕು. ಮಾತ್ರವಲ್ಲದೆ 9 ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅನುಷ್ಠಾನಕ್ಕೆ ಒತ್ತಡ ತರಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕನ್ನಡಿಗರಿಗೆ ಉದ್ಯೋಗ ಸಿಗುವಂತಹ ವಿಧೇಯಕ ಜಾರಿಗೊಳಿಸಲು ಮುಂದಾಗಿದ್ದ ರಾಜ್ಯಸರ್ಕಾರವನ್ನು ಉದ್ಯಮಿಗಳು ಬೆದರಿಸಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆ ನೀಡಿದ್ದಾರೆ. ಬೇರೆ ರಾಜ್ಯದಲ್ಲಿ ಸ್ಥಳೀಯರಿಗೆ ಶೇ.60ರಷ್ಟು ಉದ್ಯೋಗ ನೀಡಬೇಕೆಂದು ಕಾಯ್ದೆ ಮಾಡಿರುವುದಕ್ಕೆ ಉದ್ಯಮಿಗಳ ತಕರಾರು ಇಲ್ಲ. ಆದರೆ ಕರ್ನಾಟಕದಲ್ಲಿ ವಿರೋಧ ಮಾಡುತ್ತಿದ್ದಾರೆ. ಇದಲ್ಲದೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ಕಾರ್ಮಿಕ, ವಾಣಿಜ್ಯ ಮತ್ತು ಕೈಗಾರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೊಂದಾಣಿಕೆ ಇಲ್ಲ. ಈ ಮೂರು ಇಲಾಖೆ ಗೊಂದಲ ಸೃಷ್ಟಿಸುತ್ತಿವೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯಸರ್ಕಾರ ತೋರಿಕೆಗೆ ಅಥವಾ ಭಾವನಾತ್ಮಕವಾಗಿ ಏನನ್ನೋ ಸಾಧಿಸಲು ವಿಧೇಯಕ ಮಂಡಿಸಲು ಪ್ರಯತ್ನ ಮಾಡದಿರುವುದು ಸರಿಯಲ್ಲ. ಕೂಡಲೇ ಎರಡು ಸದನದಲ್ಲಿಯೂ ಮಂಡಿಸಿ ಅಂಗೀಕಾರ ಮಾಡಬೇಕು. ಈ ವಿಚಾರದಲ್ಲಿ ಸರ್ವಪಕ್ಷಗಳೂ ಒಂದಾಗಬೇಕು. ಈ ನಿಟ್ಟಿನಲ್ಲಿ ಕಸಾಪ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕು ಎಂದರು.
ದಸಂಸ ಸ್ವಾಭಿಮಾನಿ ಕೃಷ್ಣಪ್ಪ ಬಣದ ಡಿ.ಕೆ.ಅಂಕಯ್ಯ, ತಗ್ಗಹಳ್ಳಿ ಬಸವರಾಜು, ಕದಂಬ ಸೈನ್ಯ ರಾಜ್ಯ ಸಹಕಾರ್ಯದರ್ಶಿ ನಾಗೇಶ್, ಗುಡಿಗೇನಹಳ್ಳಿ ಆರಾಧ್ಯ, ರಾಮು, ಉಮೇಶ್, ಮೋಹನ್, ಕೆಂಪಯ್ಯ ಇದ್ದರು.