

ಮದ್ದೂರು : ಜೆಡಿಎಸ್ ಪಕ್ಷದವರು ಯಾವ ಪುರುಷಾರ್ಥ ಹಾಗೂ ಘನಕಾರ್ಯಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೋ ತಿಳಿದಿಲ್ಲ ಎಂದು ಶಾಸಕ ಕೆ.ಎಂ.ಉದಯ ಹೇಳಿದರು.
ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಬಹಳಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ ಎಂಬ ಬಗ್ಗೆ ಪೆನ್‌ಡ್ರೈವ್ ಪ್ರಕರಣದಿಂದ ಬೆಳಕಿಗೆ ಬಂದಿದೆ. ಸಂತ್ರಸ್ತೆಯರ ಪರವಾಗಿ ಜೆಡಿಎಸ್ ನಾಯಕರುಧ್ವನಿ ಎತ್ತಿಲ್ಲ. ಅವರಿಗೆ ಧೈರ‌್ಯತುಂಬಿ, ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ. ಇವರ ಮನೆ ಹೆಣ್ಣುಮಕ್ಕಳೇ ಹೀಗೆ ಆಗಿದ್ದರೆ ಇದೇ ರೀತಿ ಮಾಡುತ್ತಿದ್ದರಾ ? ಯಾವ ನೈತಿಕತೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ಜೆಡಿಎಸ್‌ನಾಯಕರ ವಿರುದ್ಧ ಹರಿಹಾಯ್ದರು.
ಜೆಡಿಎಎಸ್ ಕಾರ್ಯಕರ್ತರು ಇನ್ನಾದರೂ ಎಚ್ಚೆತ್ತ್ತುಕೊಳ್ಳಬೇಕು. ಇಷ್ಟು ದಿನ ಅಂಧಾಭಿಮಾನದಲ್ಲಿ ಮುಳುಗಿದ್ದು ಸಾಕು. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡೋದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ಪ್ರತಿಭಟನಾಕಾರರು ಸರ್ಕಾರದ ಮೇಲೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಸತ್ಯಾಂಶ ಜನತೆಗೆ ತಿಳಿದಿದೆ. ಜೆಡಿಎಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಕುಮಾರಸ್ವಾಮಿ ಜನರ ಎದುರು ಕ್ಷಮೆ ಕೇಳುವುದನ್ನು ಬಿಟ್ಟು ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಉದಯ್ ದೂರಿದರು.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರನ್ನು ವಜಾಗೊಳಿಸಿ, ಎಚ್. ಡಿ. ಕುಮಾರ ಸ್ವಾಮಿ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಬೇಕಿತ್ತಾ?. ನಿಖಿಲ್ ಕುಮಾರ್ ಸ್ವಾಮಿ ಯುವ ಘಟಕದ ರಾಜ್ಯಾಧ್ಯಕ್ಷ ರಾಗಬೇಕಿತ್ತಾ? ಅವರ ಪಕ್ಷದಲ್ಲಿ ಬೇರೆ ಕಾರ್ಯಕರ್ತರು, ಮುಖಂಡರು ಇಲ್ಲವೇ ಎಂದು ಅವರು ಪ್ರಶ್ನಿಸಿದರು. ನೊಂದ ಮಹಿಳೆಯರ ಮನೆಗೆ ಹೋಗಿ ಕ್ಷಮೆ ಕೇಳುವುದನ್ನು ಬಿಟ್ಟು ರಸ್ತೆಯಲ್ಲಿ ನಾಟಕ ಮಾಡುತ್ತಿದ್ದಾರೆ. ಪ್ರಜ್ವಲ್ ಸಾಚಾ ಆಗಿದ್ದರೆ ವಿದೇಶದಿಂದ ಬಂದು ಎಸ್‌ಐಟಿ ತನಿಖೆಗೆ ಸಹಕರಿಸಬೇಕಿತ್ತು. ಈಗ ಕಾಲ ಬದಲಾಗಿದೆ. ಜಾದಳದ ದಬ್ಬಾಳಿಕೆ ನಡೆಯೋಲ್ಲ ಎಂದು ಎಚ್.ಡಿ.ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು. ಮಾಜಿ ಸಿಎಂ ಕುಮಾರಸ್ವಾಮಿಯೂ ಸಾಚಾ ಅಲ್ಲ. ಯಾರಾದರೂ ದೂರು ಕೊಟ್ಟರೆ ಸರ್ಕಾರ ಅವರ ವಿರುದ್ಧವೂ ತನಿಖೆ ಮಾಡಲಿದೆ ಎಂದರು. ಮನ್ ಮುಲ್ ನಾಮ ನಿರ್ದೇಶಕ ಹರೀಶ್, ಕದಲೂರು ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ ಇತರರು ಇದ್ದರು.