

ಹರೀಶ್ ಮೋಟುಕಾನ, ಮಂಗಳೂರು
ಸಾಗರ ತೀರದ ರಕ್ಷಣೆಯ ಹೊಣೆ ನಿಭಾಯಿಸುತ್ತಿರುವ ಕರಾವಳಿ ಕಾವಲು ಪೊಲೀಸ್ ಪಡೆ ಮೀನುಗಾರರ ಸುರಕ್ಷತೆಗಾಗಿ ಅನುಷ್ಠಾನಗೊಳಿಸಿದ ‘ಕಡಲು’ ಆ್ಯಪ್‌ಗೆ ಮೀನುಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 9 ಸಾವಿರಕ್ಕಿಂತಲೂ ಅಧಿಕ ಮೀನುಗಾರಿಕಾ ದೋಣಿಗಳು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿವೆ.
ಸಮುದ್ರಕ್ಕಿಳಿಯುವ ಮೀನುಗಾರರ ಸುರಕ್ಷತೆ, ಸಮುದ್ರದಲ್ಲಿರುವ ಬೋಟ್‌ಗಳು ಹಾಗೂ ಅದರಲ್ಲಿರುವ ಕಾರ್ಮಿಕರ ಒಟ್ಟು ವಿವರ ದಾಖಲೀಕರಣಕ್ಕಾಗಿ ‘ಕಡಲು’ ಆ್ಯಪ್ ಸಿದ್ಧಪಡಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರಿಗೆ ಈ ಆ್ಯಪ್ ಉಪಯೋಗವಾಗಲಿದೆ. ಸಾಂಪ್ರದಾಯಿಕ ಸಹಿತ ಉಡುಪಿಯಲ್ಲಿ 4 ಸಾವಿರ, ದಕ್ಷಿಣ ಕನ್ನಡದಲ್ಲಿ 3 ಸಾವಿರ ಹಾಗು ಉತ್ತರ ಕನ್ನಡದಲ್ಲಿ 2,500 ಮೀನುಗಾರಿಕಾ ದೋಣಿಗಳು ‘ಕಡಲು’ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿವೆ.
ಇದುವರೆಗೆ ಮೀನುಗಾರಿಕೆಗೆ ತೆರಳುವ ಮೀನುಗಾರರು ಹಾಗೂ ಬೋಟ್‌ಗಳ ವಿವರವನ್ನು ಮೌಖಿಕ ಅಥವಾ ಕಾಗದ ದಾಖಲೆಯ ಮೂಲಕ ಕರಾವಳಿ ಕಾವಲು ಪೊಲೀಸ್ ಪಡೆಯು ಮೀನುಗಾರಿಕಾ ಇಲಾಖೆ ಅಥವಾ ಮೀನುಗಾರಿಕಾ ದಕ್ಕೆಯಲ್ಲಿ ಸಂಗ್ರಹಿಸುತ್ತಿತ್ತು. ಇದು ಬಹುತೇಕ ಸಂದರ್ಭ ಪೂರ್ಣಮಟ್ಟದಲ್ಲಿ ಲಭ್ಯವಿರುವುದೂ ಇಲ್ಲ. ಆದರೆ ಮೀನುಗಾರಿಕೆಗೆ ತೆರಳಿದ ಬಳಿಕ ಮೀನುಗಾರರು ಸಮಸ್ಯೆಗೆ ಸಿಲುಕಿದರೆ ಅಥವಾ ಸಮುದ್ರದಲ್ಲಿ ಅಪರಾಧ ಚಟುವಟಿಕೆ ನಡೆದರೆ ಬಳಿಕ ತನಿಖೆ ನಡೆಸಲು ಕರಾವಳಿ ಕಾವಲು ಪೊಲೀಸ್ ಪಡೆಗೆ ಸಮಸ್ಯೆ ಎದುರಾಗುತ್ತಿತ್ತು. ಈ ಕಾರಣದಿಂದ ಸರ್ಕಾರದ ವತಿಯಿಂದಲೇ ಆ್ಯಪ್ ಸಿದ್ಧಪಡಿಸಿ, ಅದರಲ್ಲೇ ಮೀನುಗಾರರ ಮಾಹಿತಿ ಇರಿಸಲು ಕರಾವಳಿ ಕಾವಲು ಪೊಲೀಸ್ ಪಡೆ ಕಾರ್ಯಾರಂಭಿಸಿದೆ.
ಸಮುದ್ರದಲ್ಲಿ ಸಂಚರಿಸುವ ಬೋಟ್‌ಗಳ ನಿಖರ ಮಾಹಿತಿ ಲಭ್ಯವಿಲ್ಲದ ಕಾರಣದಿಂದ ಅಪರಿಚಿತ ಬೊಟ್‌ಗಳು ಬಂದರೂ ಕೆಲವೊಮ್ಮೆ ಗೊತ್ತಾಗುವುದಿಲ್ಲ. ಹೀಗಾಗಿ ಸಮುದ್ರದಲ್ಲಿರುವ ಮೀನುಗಾರರ ಎಲ್ಲ ಬೋಟ್‌ಗಳ ನಿಖರ ಮಾಹಿತಿ ಪಡೆಯುವುದು ಅನಿವಾರ್ಯ. ಇದಕ್ಕಾಗಿ ಈ ಆ್ಯಪ್ ಕಾರ್ಯನಿರ್ವಹಿಸಲಿದೆ.
ಆ್ಯಪ್ ಕಾರ್ಯನಿರ್ವಹಣೆ ಹೇಗೆ?: ಕಡಲಿಗಿಳಿಯುವ ಮೀನುಗಾರರು ದಕ್ಕೆಯಿಂದ ತೆರಳುವ ಮುನ್ನ ಆ್ಯಪ್‌ನಲ್ಲಿ ಹೆಸರು, ಆಧಾರ್ ನಂಬರ್, ದಿನಾಂಕ ಹಾಗೂ ಚಿತ್ರಗಳನ್ನು ಅಪ್‌ಲೋಡ್ ಮಾಡಬೇಕು. ಇದು ಆ್ಯಪ್‌ನಲ್ಲಿ ಭದ್ರವಾಗಿರುವ ಕಾರಣದಿಂದ ಈ ಮಾಹಿತಿ ಪೊಲೀಸ್ ಪಡೆ ಹಾಗೂ ಮೀನುಗಾರಿಕಾ ಇಲಾಖೆಯಲ್ಲಿರುತ್ತದೆ. ಮೀನುಗಾರಿಕೆ ಮುಗಿಸಿ ಬಂದ ಬಳಿಕ ಆ ಮೀನುಗಾರರು ಆ್ಯಪ್‌ನಲ್ಲಿ ವಾಪಸಾತಿಯನ್ನೂ ಉಲ್ಲೇಖಿಸಬೇಕು. ಹೀಗಾಗಿ ಕಡಲಿನಲ್ಲಿ ಪ್ರಸ್ತುತ ಎಷ್ಟು ಬೋಟ್‌ಗಳಿವೆ ಎಂಬ ಮಾಹಿತಿ ನಿಖರವಾಗಿರುಗುತ್ತದೆ. ಜತೆಗೆ ಆ್ಯಪ್‌ನಲ್ಲಿ ಮೀನುಗಾರರಿಗೆ ಸಹಾಯವಾಗಲು ಹವಾಮಾನ ವರದಿ ಹಾಗೂ ಮುನ್ನೆಚ್ಚರಿಕೆಗಳನ್ನೂ ನೀಡಲಾಗುತ್ತದೆ.
ಕರಾವಳಿ ರಕ್ಷಣೆಗೆ 9 ಠಾಣೆಗಳು: ತಲಪಾಡಿಯಿಂದ ಉತ್ತರ ಕನ್ನಡದ ಮಾಜಾಲಿ ತನಕದ 320 ಕಿ.ಮೀ. ಉದ್ದದ ಕರಾವಳಿ ತಟ ರಕ್ಷಣೆಗೆ 9 ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನ ತಣ್ಣೀರುಬಾವಿ, ಹೆಜಮಾಡಿ, ಮಲ್ಪೆ, ಗಂಗೊಳ್ಳಿ, ಭಟ್ಕಳ, ಕುಮಟ, ಹೊನ್ನಾವರ, ಬೇಲಿಕೇರಿ ಹಾಗೂ ಕಾರವಾರ ಠಾಣೆಗಳಿವೆ. ಪ್ರತೀ ಠಾಣೆಯಲ್ಲಿ ನಿರೀಕ್ಷಕರು, ಉಪನಿರೀಕ್ಷಕರು, ಹೆಡ್‌ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್, ಶಸಸಜ್ಜಿತ ಸಿಬ್ಬಂದಿ ಹಾಗೂ ಸ್ಪೀಡ್ ಬೋಟ್ ಸಿಬಂದಿ ಸೇರಿದಂತೆ ಪ್ರತೀ ಠಾಣೆಯಲ್ಲಿ 57 ಮಂದಿ ಕಾರ್ಯನಿರ್ವಹಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಸಂಶಯಾಸ್ಪದ ಬೋಟ್, ವಾಹನ ಕಂಡುಬಂದರೆ ಕರಾವಳಿ ಕಾವಲು ಪೊಲೀಸ್ ಪಡೆ ಕಾರ್ಯನಿರ್ವಹಿಸುತ್ತದೆ.
ಮೀನುಗಾರರ ಸುರಕ್ಷತೆ ಜತೆಗೆ ಅವರ ನಿಖರ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಕರಾವಳಿ ಕಾವಲು ಪೊಲೀಸ್ ಪಡೆ ಮೀನುಗಾರಿಕಾ ಇಲಾಖೆಯ ಸಹಕಾರದೊಂದಿಗೆ ಹೊಸ ಆ್ಯಪ್ (ಕಡಲು) ಸಿದ್ಧಪಡಿಸಿ ಕಾರ್ಯಾರಂಭ ಮಾಡಿದೆ. ಅಧಿಕ ಸಂಖ್ಯೆಯಲ್ಲಿ ಮೀನುಗಾರರು ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ದಾಖಲಿಸುತ್ತಿದ್ದಾರೆ. ಆ್ಯಪ್‌ಗೆ ಉತ್ತಮ ಸ್ಪಂದನೆ ಸಿಗುತ್ತಿದೆ.
ಚೇತನ್ ಆರ್ ಎಸ್ಪಿ, ಕರಾವಳಿ ಕಾವಲು ಪೊಲೀಸ್ ಪಡೆ