

ಮಂಡ್ಯ: ವಿದ್ಯಾರ್ಥಿಗಳು ಸಮಾಜಕ್ಕೆ ಸೇವೆ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಸಲಹೆ ನೀಡಿದರು.
ಪಾಂಡವಪುರ ತಾಲೂಕು ಕದಲಗೆರೆ ಗ್ರಾಮದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮೇಲುಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕದಲಗೆರೆ ಗ್ರಾಮದಲ್ಲಿ ಶಿಬಿರಾರ್ಥಿಗಳು ಮಾಡಿರುವ ಕಾರ್ಯ ಶ್ಲಾಘನಾರ್ಹ. ಕಲ್ಯಾಣಿ ಸ್ವಚ್ಛ ಮಾಡಿರುವುದು, ದೇವಸ್ಥಾನದ ಆವರಣದಲ್ಲಿ ಗಿಡ ನೆಟ್ಟಿರುವುದು ಹಾಗೂ ಪುರಾತನ ಅರಳಿ ಕಟ್ಟೆ ಸ್ವಚ್ಛಗೊಳಿಸಿರುವುದು, ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟಿರುವುದು ಉತ್ತಮ ಕೆಲಸ ಎಂದರು.
ಕದಲಗೆರೆ ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿರುವುದು ಸಂತೋಷದ ವಿಷಯ. ಎಲ್ಲಾ ಗ್ರಾಮಗಳಲ್ಲಿಯೂ ಈ ರೀತಿಯ ಪ್ರಜ್ಞೆ ಮೂಡಬೇಕು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಕನಿಷ್ಟ ಸೌಲಭ್ಯದಲ್ಲಿ ಹೇಗೆ ಜೀವನವನ್ನು ರೂಡಿಸಿಕೊಳ್ಳಬೇಕು. ಮತ್ತು ಸಮಾಜಕ್ಕೆ ಹೇಗೆ ಒಳಿತನ್ನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಿದರು.
ಶಿಬಿರದ ಕಾರ್ಯಕ್ರಮ ಅಧಿಕಾರಿ ಎಂ.ಎಸ್.ಕೃಷ್ಣ, ಗ್ರಾಮಕ್ಕೆ ಆಗಮಿಸಿದ ದಿನದಿಂದ ಮುಕ್ತಾಯದವರೆಗೂ ಸಹಕರಿಸಿದ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಂಜುಂಡಯ್ಯ, ಕಾರ್ಯಕ್ರಮ ಅಧಿಕಾರಿಗಳಾದ ಸಿ.ಪರಮೇಶ್ವರ್, ಮಹೇಶ್‌ಕುಮಾರ್, ಕಾವ್ಯಾ, ಪುನೀತ್‌ಕುಮಾರ್, ವಿಜಯ್‌ಕುಮಾರ್ ಇತರರಿದ್ದರು.