

ಎನ್.ಆರ್.ಪುರ: ಕಡಹಿನಬೈಲು ಏತ ನೀರಾವರಿ ಯೋಜನೆಯಿಂದ ಸಂಬಂಧಪಟ್ಟ ಎಲ್ಲ ರೈತರಿಗೆ ಸಮರ್ಪಕವಾಗಿ ನೀರು ಸಿಗುವಂತಾಗಬೇಕು ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಶೆಟ್ಟಿಕೊಪ್ಪದಲ್ಲಿ ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ಕಡಹಿನಬೈಲು ಏತ ನೀರಾವರಿ ಯೋಜನೆಯಿಂದ ಸುತ್ತಮುತ್ತಲಿನ 60 ಕೆರೆಗಳು ಭರ್ತಿಯಾಗಿ ಕೆರೆಯ ಅಚ್ಚುಕಟ್ಟು ಭಾಗದ ರೈತರ ಜಮೀನು ನೀರಾವರಿಯಾಗಬೇಕಿದೆ. ಪೈಪ್‌ಗಳ ದುರಸ್ತಿ, ಕೆರೆ ಹೂಳೆತ್ತಲು 9 ಕೋಟಿ ರೂ. ಮಂಜೂರಾಗಿದ್ದರೂ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದರು.
ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘದ ಸಮುದಾಯ ಭವನಕ್ಕೆ ಈಗಾಗಲೇ 50 ಲಕ್ಷ ರೂ. ಮಂಜೂರಾಗಿದೆ. ಈ ಸಮುದಾಯ ಭವನದಿಂದ ಇಲ್ಲಿನ ಜನರಿಗೆ ಅನುಕೂಲವಾಗಲಿದೆ. ಹೊನ್ನೇಕೊಡಿಗೆ, ಎನ್.ಆರ್.ಪುರ ಸಂಪರ್ಕ ಸೇತುವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರಂಭದಲ್ಲಿ 5 ಕೋಟಿ ಮಂಜೂರು ಮಾಡಿದ್ದರು. ಈಗ 35 ಕೋಟಿ ರೂ.ವೆಚ್ಚವಾಗಲಿದೆ. ಸೇತುವೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಈ ಸೇತುವೆಯಿಂದ ನೂರಾರು ಜನರಿಗೆ ಅನುಕೂಲವಾಗಲಿದೆ ಎಂದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಹಿಂದುಳಿದ ವರ್ಗಗಳ ಸೇವಾ ಸಂಘದ ಅಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಎ.ಬಿ.ಮಂಜುನಾಥ್, ಪೂರ್ಣಿಮ, ವಾಣಿ ನರೇಂದ್ರ, ಶೈಲಾ ಮಹೇಶ್, ಲಿಲ್ಲಿ ಮಾತುಕುಟ್ಟಿ, ರವೀಂದ್ರ, ಮುಖಂಡರಾದ ಬಿ.ಕೆ.ಜಾನಕಿರಾಂ, ಎನ್.ಎಂ.ಕಾಂತರಾಜ್, ಎಂ.ಟಿ.ಕುಮಾರ್, ಶೆಟ್ಟಿಕೊಪ್ಪ.ಎಂ.ಮಹೇಶ್, ಈಶ್ವರ್ ಇದ್ದರು.