

ಬೆಳ್ಳೆಪ್ಪ ದಳವಾಯಿ ಕಡಬಿ
ಯರಗಟ್ಟಿ ತಾಲೂಕಿನ ಸುಕ್ಷೇತ್ರ ಕಡಬಿ ಗ್ರಾಮದ ಶ್ರೀ ಬೀರಸಿದ್ದೇಶ್ವರ ಮಹಿಮೆ ಅಪಾರವಾಗಿದ್ದು, ಭಕ್ತರು ಬೇಡಿದ ವರವನ್ನು ನೀಡುವ ದೈವವಾಗಿದ್ದಾರೆ. ಗ್ರಾಮದಲ್ಲಿ ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವವು ಶನಿವಾರ ಅದ್ದೂರಿಯಾಗಿ ಆರಂಭವಾಗಿದ್ದು, ಫೆ.24ರ ವರೆಗೆ ಜರುಗಲಿದೆ.
ಹಿನ್ನೆಲೆ: ಶ್ರೀ ಬೀರಸಿದ್ದೇಶ್ವರರು ಚಂದನಗಿರಿ ಗ್ರಾಮದಲ್ಲಿ ಬರಮ ದೇವರು, ಸುರಾವತಿ ಉದರದಲ್ಲಿ ಜನಿಸಿದರು. ಮಂದನಗಿರಿಯಲ್ಲಿ ಬೆಳೆದ ಇವರು ಗುರುಗಳಾದ ರೇವಣಸಿದ್ದ ಮತ್ತು ಶಿಷ್ಯ ಮಾಳಪ್ಪ ಜತೆಗೆ ದೇಶಾದ್ಯಂತ ಸಂಚರಿಸಿ ತಮ್ಮ ಪವಾಡಗಳಿಂದ ಭಕ್ತಗಣವನ್ನು ಆಶೀರ್ವದಿಸಿದ್ದಾರೆ.
ಪವಾಡಗಳು:ಈ ಹಿಂದೆ ಕೇಶವ ಎಂಬ ರಾಜನಿಗೆ ಮಾರಣಾಂತಿಕ ರೋಗ ತಗುಲಿತ್ತು. ಆ ರೋಗವನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆಗ ಬೀರಸಿದ್ದೇಶ್ವರರು ಆ ರೋಗವನ್ನು ಭಂಡಾರದಿಂದ ಗುಣಪಡಿಸಿದರು. ಕೇಶರಾಜನು ಪ್ರತಿಯಾಗಿ ಬೀರಸಿದ್ದೇಶ್ವರರಿಗೆ ಪಂಚಡಂಗಿ, ರುಮ್‌ಚೂರಿ, ಕತ್ತಿ ಕಟಾರಿಯನ್ನು ಮಾಡಿಸಿಕೊಟ್ಟನು.
ಜಮಖಂಡಿ ಪಕ್ಕದ ಮಂಟೂರ ಕಣವಿ ಮೇಲೆ ಕ್ವಾಣಾಸುರ ಎಂಬ ರಾಕ್ಷಸ ಜನರಿಗೆ ಉಪಟಳ ನೀಡುತ್ತಿದ್ದ. ಇದನ್ನು ಅರಿತ ಬೀರಸಿದ್ದೇಶ್ವರರು ನಾಗಠಾಣ ಎಂಬ ಊರಿಗೆ ತೆರಳಿ ರಾಕ್ಷಸನ ಜತೆಗೆ ಯುದ್ಧ ಮಾಡಿ ದೈತನನ್ನು ನೆಲಕ್ಕೆ ಕೆಡವುತ್ತಾರೆ. ಆಗ ರಾಕ್ಷಸ ಸಾವು ನಿಶ್ಚಿತ ಎಂದು ತಿಳಿದು ಬೀರಸಿದ್ದೇಶ್ವರರ ಬಳಿ ಕ್ಷಮೆ ಕೋರಿ ಸೋಲು ಒಪ್ಪಿಕೊಂಡು ವರ ಬೇಡುತ್ತಾನೆ. ಹೀಗೆ ಬೀರಸಿದ್ದೇಶ್ವರರು ಅನೇಕ ಪವಾಡಗಳಿಂದ ಭಕ್ತ ಸಮೂಯವನ್ನು ಸಲುಹಿದ್ದಾರೆ.
ಬೀರಸಿದ್ದೇಶ್ವರ ಜಾತ್ರಾ ಕಾರ್ಯಕ್ರಮಗಳ ವಿವರ: ಫೆ.23ರಂದು ಶ್ರೀ ಬೀರಸಿದ್ದೇಶ್ವರ ಗದ್ದುಗೆಗೆ ಅಭಿಷೇಕ, ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ದೇವರುಗಳಿಗೆ ಗ್ರಾಮದ ಸುಮಂಗಲೆಯರಿಂದ ಉಡಿತುಂಬುವುದು ಹಾಗೂ ಮಹಾಪ್ರಸಾದ ನೆರವೇರುವುದು. ರಾತ್ರಿ 8 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವವು. ಫೆ.24ರಂದು ಎಲ್ಲ ದೇವರುಗಳನ್ನು ಕಳಿಸುವುದರೊಂದಿಗೆ ಜಾತ್ರೆ ಮಂಗಲಗೊಳ್ಳುವುದು ಎಂದು ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ.
ಕಡಬಿಯ ಶ್ರೀ ಬೀರಸಿದ್ದೇಶ್ವರ ಜಾತ್ರೆ ಅದ್ದೂರಿಯಾಗಿ ನೆರವೇರಲಿ, ಬೀರಸಿದ್ದೇಶ್ವರ ಆದರ್ಶಗಳನ್ನು ಪಾಲಿಸಿ ಪವಾಡ ಪುರುಷ ಬೀರೇಶ್ವರ ಕೃಪೆಗೆ ಪಾತ್ರರಾಗೋಣ. ವಿಶ್ವಾಸ ವೈದ್ಯ, ಶಾಸಕ ಸವದತ್ತಿ ಕಡಬಿ ಶ್ರೀ ಬೀರಸಿದ್ದೇಶ್ವರ ಜಾತ್ರೆಯು ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದು, ಶ್ರೀ ಬೀರಸಿದ್ದೇಶ್ವರನ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ. ಗಂಗಪ್ಪ ಲಕ್ಷ್ಮಣ ಮೀಶಿ, ಗ್ರಾಪಂ ಸದಸ್ಯ, ಕಡಬಿ