ಹ್ಯಾಕರ್‌ಗಳ ಸಂಚಿಗೆ ಕಡಬದ ಅಮಾಯಕ ಜೈಲುಪಾಲು

mng- aug 17- chandrashekara kadaba
Published on
  • ರಿಯಾದ್‌ನಲ್ಲಿ ಶಿಕ್ಷೆ * ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಯುವಕನ ತಾಯಿ ಮನವಿ
  • ವಿಜಯವಾಣಿ ಸುದ್ದಿಜಾಲ ಮಂಗಳೂರು
    ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆಂದು ವಿದೇಶಿ ನೆಲದಲ್ಲಿ ದುಡಿಯಲು ತೆರಳಿದ್ದ ಕಡಬದ ಅಮಾಯಕ ಯುವಕ ಹ್ಯಾಕರ್‌ಗಳ ಮೋಸಕ್ಕೆ ಸಿಲುಕಿ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್‌ನ ಜೈಲಿನಲ್ಲಿ ಬಂಧಿಯಾಗಿದ್ದಾರೆ.
    ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಎಂ.ಕೆ. ತೊಂದರೆಗೊಳಗಾದವರು. ಇವರ ತಾಯಿ ಹೇಮಾವತಿ ಮಗನ ಬಿಡುಗಡೆಗಾಗಿ ಸಾಮಾಜಿಕ ಕಾರ್ಯಕರ್ತರ ಮೂಲಕ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದ ಕದ ತಟ್ಟುತ್ತಿದ್ದಾರೆ. ಚಂದ್ರಶೇಖರ ಕುಟುಂಬದ ನಿಕಟವರ್ತಿ, ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಮಂಗಳೂರಿನ ಎನ್‌ಇಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
    ರಿಯಾಧ್‌ನ ಅಲ್ಫಾನರ್ ಸೆರಾಮಿಕ್ಸ್ ಕಂಪನಿಯಲ್ಲಿ ದುಡಿಯುತ್ತಿದ್ದ ಚಂದ್ರಶೇಖರ್ ಸಿಮ್ ಖರೀದಿ ಸಂದರ್ಭ ಅಂಗಡಿಯಾತ ಎರಡು ಬಾರಿ ಥಂಬ್ ಪಡೆದಿದ್ದು, ವಾರದ ಬಳಿಕ ಹೊಸ ಸಿಮ್‌ಗೆ ಅರೆಬಿಕ್ ಭಾಷೆಯಲ್ಲಿ ಸಂದೇಶ ಬಂದಿತ್ತು. ವಿಷಯ ತಿಳಿಯದ ಚಂದ್ರಶೇಖರ್ ಆ ಸಂದೇಶದ ಲಿಂಕ್ ಒತ್ತಿದ್ದರು. ಎರಡು ದಿನದ ಬಳಿಕ ಕರೆ ಮಾಡಿದ ವ್ಯಕ್ತಿಯೋರ್ವ ಒಟಿಪಿ ಕೇಳಿದ್ದು, ಚಂದ್ರಶೇಖರ್ ನೀಡಿದ್ದರು. ಜನವರಿಯಲ್ಲಿ ಮದುವೆ ನಿಗದಿಯಾಗಿ ಅದರ ಸಿದ್ಧತೆಯಲ್ಲಿದ್ದಾಗಲೇ ರಿಯಾಧ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
    * ನೈಜ ವಿಷಯ ಏನು?: ಚಂದ್ರಶೇಖರ್ ಅವರ ಭಾರತೀಯ ಸ್ನೇಹಿತರು ಮಾಹಿತಿ ಕಲೆಹಾಕಿದಾಗ ಒಂದು ಸಂಚಿನಲ್ಲಿ ಆತ ಸಿಲುಕಿದ್ದು ದೃಢವಾಗಿದೆ. ಚಂದ್ರಶೇಖರ್ ಗಮನಕ್ಕೆ ತಾರದೆ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದು, ಆ ದೇಶದ ಮಹಿಳೆಯೋರ್ವರ 22 ಸಾವಿರ ರಿಯಲ್(ಸುಮಾರು 18 ಲಕ್ಷ ರೂ.) ಜಮೆಯಾಗಿತ್ತು. ಬಳಿಕ ಆ ಮೊತ್ತ ಖಾತೆಯಿಂದ ಬೇರೆ ದೇಶಕ್ಕೆ ವರ್ಗಾವಣೆಯಾಗಿದೆ. ಹಣ ಕಳೆದುಕೊಂಡ ಮಹಿಳೆ ಚಂದ್ರಶೇಖರ್ ಅವರ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು 2022ರ ನವೆಂಬರ್‌ನಲ್ಲಿ ಚಂದ್ರಶೇಖರ್ ಅವರನ್ನು ಬಂಧಿಸಿದ್ದರು. ಈ ಮಾಹಿತಿಯನ್ನು ಸ್ನೇಹಿತರು ಕುಟುಂಬಕ್ಕೆ ತಿಳಿಸಿದ್ದರು. ಹ್ಯಾಕರ್‌ಗಳಿಂದ ಚಂದ್ರಶೇಖರ್‌ಗೆ ಅನ್ಯಾಯವಾಗಿದ್ದು, ಇದನ್ನು ತಿಳಿದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಎಂಟು ತಿಂಗಳಿಂದ ಕುಟುಂಬ ಮಗನನ್ನು ಕ್ಷೇಮವಾಗಿ ಸ್ವದೇಶಕ್ಕೆ ಕರೆತರಲು ಪ್ರಯತ್ನ ಮಾಡುತ್ತಿದೆ. ಅಲ್ಲಿನ ಸರ್ಕಾರ ಈ ಪ್ರಕರಣದಲ್ಲಿ ಸಮಗ್ರ ತನಿಖೆ ಮಾಡಿಲ್ಲ. ಖಾತೆಗೆ ಹಣ ಎಲ್ಲಿಂದ ಬಂತು, ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ತನಿಖೆ ನಡೆಸದೆ ಮಹಿಳೆಗೆ ವಂಚನೆಯಾಗಿದೆ ಎಂದಷ್ಟೆ ಕೇಸು ದಾಖಲಿಸಿ ಬಂಧಿಸಿದೆ. ತಕ್ಷಣಕ್ಕೆ ಮಹಿಳೆ ಕಳೆದುಕೊಂಡ 22 ಸಾವಿರ ರಿಯಲ್ ಪಾವತಿಸಬೇಕು ಮತ್ತು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಚಂದ್ರಶೇಖರ್ ವಿರುದ್ದ ಅಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.

ಕಾನೂನು ನೆರವು ನೀಡದ ಕಂಪನಿ
ಚಂದ್ರೇಖರ್ ಕೆಲಸ ಮಾಡುವ ಕಂಪನಿ ಅವರಿಗೆ ಭದ್ರತೆ ಮತ್ತು ಕಾನೂನು ನೆರವು ನೀಡಬೇಕಿತ್ತು. ಆದರೆ ಮನೆಯವರಿಗೂ ಮಾಹಿತಿ ನೀಡಿಲ್ಲ. ಹೀಗಾಗಿ ಸಂಸ್ಥೆಯ ವಿರುದ್ಧ ಕೂಡ ಕಾನೂನು ಸಮರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಆತನ ಸ್ನೇಹಿತರು ಈಗಾಗಲೇ 10 ಲಕ್ಷ ರೂ. ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದಾರೆ. ಆದರೂ ಆತನ ಬಿಡುಗಡೆ ಸಾಧ್ಯವಾಗಿಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೂಲಕ ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಶ್ರೀಧರ ಗೌಡ ಮಾಹಿತಿ ನೀಡಿದರು. ಆ.18ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಪತ್ರ ಚಳವಳಿ ಮೂಲಕ ಪ್ರಧಾನಿ, ವಿದೇಶಾಂಗ ಸಚಿವರ ಗಮನ ಸೆಳೆಯುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net