

ಕಡಬ: ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಯುವನಿಧಿ ಹೀಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕಡಬ ತಾಲೂಕಿಗೆ ಕಳೆದ ಡಿಸೆಂಬರ್ ತನಕ 141 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ತಾಲೂಕು ಶೇ.95 ಯಶಸ್ಸು ಗಳಿಸಿದೆ ಎಂದು ಕಡಬ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕೊಯಿಲ, ರಾಮಕುಂಜ, ಹಳೇನೇರೆಂಕಿ, ಗೋಳಿತೊಟ್ಟು ಗ್ರಾಮಗಳ ಪಂಚ ಗ್ಯಾರಂಟಿ ಯೋಜನೆಗೆ ನೋಂದಣಿಗೆ ಬಾಕಿ ಇರುವ ಮತ್ತು ತಿರಸ್ಕೃತಗೊಂಡಿರುವ ಅರ್ಜಿಗಳ ವಿಲೇವಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವನಿಧಿ ಯೋಜನೆ ಸಂಬಂಧಿಸಿದಂತೆ ಇಲಾಖೆಯ ಅರುಣ್ ಕುಮಾರ್ ಮಾಹಿತಿ ನೀಡಿದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ಉದ್ಘಾಟಿಸಿದರು. ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್, ಸದಸ್ಯ ಗಂಗಾಧರ ಶೆಟ್ಟಿ ನೆಲ್ಯಾಡಿ, ಎ.ಕೆ.ಬಶೀರ್ ಕೊಲ ಮಾತನಾಡಿದರು. ರಾಮಕುಂಜ ಗ್ರಾಪಂ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿ ಶಂಕರ್, ಸತೀಶ್ ಇಚ್ಲಂಪಾಡಿ, ಅವಿನಾಶ್, ಹರಿಣಾಕ್ಷಿ, ಜಗದೀಶ್, ಸಿ.ಜೆ.ಸೈಮನ್, ಪಂಚಾಯಿತಿ ಸದಸ್ಯರಾದ ಯತೀಶ್ ರಾಮಕುಂಜ, ಸಫೀಯ, ಗೀತಾ ಏಣಿತ್ತಡ್ಕ, ರಾಮಕುಂಜ ಪಂಚಾಯಿತಿ ಕಾರ್ಯದರ್ಶಿ ಲಲಿತಾ, ಕೊಯಿಲ ಪಂಚಾಯಿತಿ ಕಾರ್ಯದರ್ಶಿ ಪಮ್ಮು ಮೊದಲಾದವರು ಇದ್ದರು.
ಕೊಯಿಲ ಪಿಡಿಒ ಸಂದೇಶ್ ಸ್ವಾಗತಿಸಿದರು. ರಾಮಕುಂಜ ಪಿಡಿಒ ಮೋಹನ್ ಕುಮಾರ್ ವಂದಿಸಿದರು. ಅನುಷ್ಠಾನ ಸಮಿತಿ ನೋಡೆಲ್ ಅಧಿಕಾರಿ ಭರತ್ ಕುಮಾರ್ ನಿರೂಪಿಸಿದರು.