ಯಕ್ಷಗಾನದ ಧ್ವನಿವರ್ಧಕ ನಿಯಂತ್ರಣ ಸರಿಯಲ್ಲ : ಮಾನವ ಹಕ್ಕು ಆಯೋಗ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅಭಿಪ್ರಾಯ

New Project (5)
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ದ.ಕ. ಸಹಿತ ಕರಾವಳಿಯಲ್ಲಿ ಇತ್ತೀಚಿನ ಗಣೇಶೋತ್ಸವ ಸಂದರ್ಭಗಳಲ್ಲಿ ರಾತ್ರಿ 10ರ ಬಳಿಕ ಯಕ್ಷಗಾನ ಪ್ರದರ್ಶನದ ಧ್ವನಿವರ್ಧಕ ಬಳಕೆ ನಿಷೇಧಿಸಿರುವುದು ವಿಷಾದಕರ. ಧ್ವನಿವರ್ಧಕ ನಿಯಂತ್ರಣ ಕಾನೂನು ಕಾಯಂ ಆದರೆ ಯಕ್ಷಗಾನ ಕ್ಷೇತ್ರಕ್ಕದು ಭಾರಿ ದೊಡ್ಡ ಹೊಡೆತ ನೀಡಲಿದೆ. ಆದ್ದರಿಂದ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಡ ಹೇರಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಹಕರಿಸಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶಾಮ ಭಟ್ ಹೇಳಿದರು.

ಎಡನೀರು ಮಠದಲ್ಲಿ ಭಾನುವಾರ ಮಂಗಳೂರಿನ ಕಡಬ ಸಂಸ್ಮರಣ ಸಮಿತಿಯ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ದಿ.ಕಡಬ ನಾರಾಯಣ ಆಚಾರ್ಯ ಮತ್ತು ದಿ.ಕಡಬ ವಿನಯ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ದಂಪತಿಗೆ ಕಡಬ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಟೀಲು ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಕಲಾವಿದ ಎಂ.ಕೆ.ರಮೇಶ ಆಚಾರ್ಯ ಕಡಬದ್ವಯರ ಸಂಸ್ಮರಣಾ ಭಾಷಣ ಮಾಡಿದರು.

ಮಂಗಳೂರು ಕಡಬ ಸಂಸ್ಮರಣ ಸಮಿತಿ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸಿದರು. ಪುಳಿಂಚ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ, ಮೂಲ್ಕಿ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ.ಶೆಟ್ಟಿ, ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಬಾಲಕೃಷ್ಣ ಪಿ.ಭಂಡಾರಿ, ಕಟಪಾಡಿ ಆನೆಗುಂದಿ ಪೀಠದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಲೋಕೇಶ ಆಚಾರ್ಯ, ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು. ಗಿರೀಶ್ ಕಾವೂರು ಸ್ವಾಗತಿಸಿದರು. ಜಿ.ಟಿ.ಆಚಾರ್ಯ ಮುಂಬೈ ಪ್ರಾಸ್ತಾವಿಕ ಮಾತನಾಡಿದರು. ಜಗದೀಶ್ ಬೇಲಾಡಿ ವಂದಿಸಿದರು. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ತಾಳಮದ್ದಳೆ ನಡೆಯಿತು. ಬಳಿಕ ಶ್ರೀರಾಮ ದರ್ಶನ ಯಕ್ಷಗಾನ ಬಯಲಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net