ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ!: ಸಾರ್ವಜನಿಕರಿಂದ ದೂರು : ರೋಗಿಗಳಿಂದ ಮಾಹಿತಿ ಪಡೆದ ಶಾಸಕಿ ಮುರುಳ್ಯ

New Project (3)
Published on

ಕಡಬ: ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ರೋಗಿಗಳಿಂದ ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ ವಿದ್ಯುತ್ ಕಡಿತವಾಗುವ ವೇಳೆ ಜನರೇಟರ್ ಸಂಪರ್ಕ ನೀಡಲು ತಡವಾಗುತ್ತಿರುವುದು, ಆಕ್ಸಿಜನ್ ಉತ್ಪಾದನಾ ಟಕ ಇದ್ದರೂ ಬಳಕೆಯಾಗದಿರುವುದು, ಆಕ್ಸಿಜನ್ ಉತ್ಪಾದನಾ ಟಕದಲ್ಲಿ ಜಂಬೋ ಸಿಲಿಂಡರ್ ಇಲ್ಲದೇ ಇರುವುದರಿಂದ ಆಕ್ಸಿಜನ್ ಸಂಗ್ರಹಿಸಿಡಲು ಸಮಸ್ಯೆ, ಡಯಾಲಿಸಿಸ್ ಕೇಂದ್ರಕ್ಕೆ ಪೈಪ್‌ಲೈನ್ ಮೂಲಕ ಆಕ್ಸಿಜನ್ ಸಂಪರ್ಕ ಇಲ್ಲದೇ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದು, ತಜ್ಞ ವೈದ್ಯರು ಸೇರಿದಂತೆ ಕಾಯಂ ವೈದ್ಯರು ಇಲ್ಲದೇ ಇರುವುದು, ಪ್ರಯೋಗಾಲಯ ಮತ್ತು ಎಕ್ಸ್‌ರೇ ತಂತ್ರಜ್ಞರ ಹುದ್ದೆ ಸೇರಿ ಇತರ ಅಗತ್ಯ ಸಿಬ್ಬಂದಿ ಕೊರತೆ, ಆಸ್ಪತ್ರೆ ಶೌಚಗೃಹದ ಗುಂಡಿ ತುಂಬಿ ಸಮಸ್ಯೆಯಾಗುತ್ತಿರುವುದು ಮುಂತಾದ ವಿಚಾರಗಳನ್ನು ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಆಸ್ಪತ್ರೆಯ ಆಯುಷ್ ವೈದ್ಯೆ ಡಾ.ಅಶ್ವತಿ ಮರಿಯಂ ಜಾರ್ಜ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಜೆಸಿಂತಾ ಕೆ.ವಿ. ಶಾಸಕರಿಗೆ ಅಗತ್ಯ ಮಾಹಿತಿ ನೀಡಿದರು. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಬಿಜೆಪಿ ಕಡಬ ಶಕ್ತಿಕೇಂದ್ರ ಕಾರ್ಯದರ್ಶಿ ಅಶೋಕ್‌ಕುಮಾರ್ ಪಿ. ಮುಂತಾದವರು ಶಾಸಕರ ಜತೆಗಿದ್ದರು.

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಲು ಆಸ್ಪತ್ರೆಗೆ ಬರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದು, ಆ ದಿನ ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅವರೊಡನೆ ಮಾತುಕತೆ ನಡೆಸಲಿದ್ದೇನೆ. ಡಯಾಲಿಸಿಸ್ ಕೇಂದ್ರವನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಅಲ್ಲಿನ ಅಗತ್ಯತೆಗಳನ್ನು ಪೂರೈಸುವ ಕುರಿತು ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗುವುದು. ಕೊರೊನಾ ಸಂದಭರ್ ಆರಂಭಿಸಲಾಗಿರುವ ಅಕ್ಸಿಜನ್ ಘಟಕ ಕಾರ್ಯನಿರ್ವಹಿಸದೇ ಇರುವ ಬಗ್ಗೆಯೂ ಸಂಬಂಧಪಟ್ಟವರೊಡನೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಭಾಗೀರಥಿ ಮುರುಳ್ಯ ಶಾಸಕಿ

ರೋಗಿಗಳಿಂದ ಅಹವಾಲು ಆಲಿಕೆ

ರೋಗಿಗಳ ಅಹವಾಲು ಆಲಿಸಿದ ಬಳಿಕ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿ ಕರೆ ಡಿ ಮಾತನಾಡಿದ ಶಾಸಕಿ ಆಸ್ಪತ್ರೆಯಲ್ಲಿನ ತೊಂದರೆಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಳಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕಿ ಅಲ್ಲಿನ ಸಿಬಂದಿ ಹಾಗೂ ರೋಗಿಗಳಿಂದ ಮಾಹಿತಿ ಪಡೆದುಕೊಂಡರು. ಡಯಾಲಿಸಿಸ್ ಕೇಂದ್ರದಲ್ಲಿ ವಿದ್ಯುತ್ ಕಡಿತವಾಗುವ ವೇಳೆ ಜನರೇಟರ್ ಸಂಪರ್ಕ ನೀಡಲು ತಡವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಬ್ಬಂದಿ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ವಿದ್ಯುತ್ ಕಡಿತದ ವೇಳೆ ಜನರೇಟರ್ ಸ್ವಯಂ ಚಾಲನೆಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net