ಕಡಬ ಕಾಂಗ್ರೆಸ್ ಸಭೆಯಲ್ಲಿ ಬಣಗಳ ನಡುವೆ ಮಾರಾಮಾರಿ

maramaari
Published on

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿ ಕೃಷ್ಣಪ್ಪ ಜಿ. ಹಾಗೂ ನಂದಕುಮಾರ್ ಬಣದ ಮಧ್ಯೆ ಮಾರಾಮಾರಿ ನಡೆದಿದೆ.
ಕಡಬ ಅಂಬೇಡ್ಕರ್ ಭವನದಲ್ಲಿ ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಮುಖಂಡರು ಆಗಮಿಸಿದ್ದರು. ಸಭೆಗೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಹೊತ್ತಿರುವ ಉಚ್ಛಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ ಜಿ. ಬಣದವರ ಆಕ್ರೋಶಕ್ಕೆ ಕಾರಣವಾಗಿತ್ತು. ಸಭೆ ಮಾತಿನ ಚಕಮಕಿ ಮೂಲಕವೇ ಆರಂಭವಾಗಿ, ಸ್ವತಃ ಕೃಷ್ಣಪ್ಪ ಅವರೇ ಉಚ್ಛಾಟಿತ ಸದಸ್ಯರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದಿರಿ, ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ರೇಗಿಸಿದರು. ಈ ಸಭೆಯಲ್ಲಿ ಉಚ್ಛಾಟಿತರು ಭಾಗವಹಿಸಲು ಅವಕಾಶ ಇದೆಯೇ ಎಂದು ಇನ್ನೋರ್ವ ಮುಖಂಡರು ಪ್ರಶ್ನಿಸಿದಾಗ ಪ್ರಾರಂಭವಾದ ಮಾತಿನ ಚಕಮಕಿ, ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿತು. ಕೊನೆಗೆ ಪೋಲಿಸರ ಮಧ್ಯಪ್ರವೇಶದ ಬಳಿಕ ಘಟನೆ ತಣ್ಣಗಾಯಿತು. ಕೃಷ್ಣಪ್ಪ ಬಣದ ಮೂರು ನಾಲ್ವರು ಮುಖಂಡರು, ನಂದ ಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪವೂ ವ್ಯಕ್ತವಾಗಿದ್ದು, ಮಾರಾಮಾರಿ ನಡೆದಿರುವ ವಿಡಿಯೋಗಳು ಲಭ್ಯವಾಗಿವೆ.
ನಂದಕುಮಾರ್ ಬಣದ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಿದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net