

ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಕಾರು ಹಾಗೂ ಬೊಲೆರೋ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಹೊಸ್ಮಠ ಹಲ್ಲಂಗೇರಿ ನಿವಾಸಿ ನಿಕೋಲಸ್ ಮಾರ್ಟಿಸ್ ಎಂಬುವರ ಪುತ್ರ ನವೀನ್ ಮಾರ್ಟಿಸ್(30)ಮೃತಪಟ್ಟವರು. ಕಾರಿನಲ್ಲಿದ್ದ ತಂದೆ ನಿಕೋಲಸ್ ಮಾರ್ಟಿಸ್, ತಾಯಿ ಸಿಸಿಲಿಯಾ ಲಸ್ರಾದೋ, ಸಹೋದರಿ ಸುಷ್ಮಾ ಮಾರ್ಟಿಸ್ ಹಾಗೂ ಪತ್ನಿ ಲರ್ವಿಟಾ ಲೋಬೊ ಗಂಭೀರ ಗಾಯಗೊಂಡಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಉಪ್ಪಿನಂಗಡಿಯಿಂದ ಹೊಸ್ಮಠ ಕಡೆಗೆ ತೆರಳುತ್ತ್ತಿದ್ದ ವೇಳೆ ಪದವು-ಬಲ್ಯ ನಡುವೆ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಪೊಲೀಸ್ ವಾಹನದಲ್ಲಿ ಗಾಯಾಳುಗಳ ಸಾಗಾಟ: ಗಂಭೀರ ಗಾಯಗೊಂಡಿದ್ದ ನಾಲ್ವರ ಪೈಕಿ ಮೂವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರೆ, ಅಲ್ಲೇ ಬಾಕಿಯಾಗಿದ್ದ ಗಾಯಾಳು ಮಹಿಳೆಯನ್ನು ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಪೊಲೀಸ್ ವಾಹನದಲ್ಲೇ ಉಪ್ಪಿನಂಗಡಿ ತನಕ ಕರೆದೊಯ್ದರು. ಅಲ್ಲಿಂದ ಉಪ್ಪಿನಂಗಡಿ ಎಸೈ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಉಮೇಶ್ ಕಡಬದಲ್ಲಿ ನಡೆಯುತ್ತಿದ್ದ ಸಚಿವ ಅಂಗಾರ ಅವರ ಅಭಿನಂದನಾ ಸಮಾರಂಭದಲ್ಲಿ ರಕ್ಷಣಾ ಕಾರ್ಯಕ್ಕೆಂದು ತೆರಳುತ್ತಿದ್ದರು.