

ಮೈಸೂರು: ವಿಜಯನಗರ 4ನೇ ಹಂತ 2ನೇ ಘಟಕಕ್ಕೆ ಕಬಿನಿಯಿಂದ 6 ಎಂ.ಎಲ್.ಡಿ ನೀರನ್ನು ಗೌರಿಹಬ್ಬದೊಳಗೆ ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ವಿಜಯನಗರ 4ನೇ ಹಂತದ 2ನೇ ಘಟ್ಟದಲ್ಲಿರುವ ಶ್ರೀ ವಿಜಯ ವಿನಾಯಕ ಸೇವಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಡಾ ಬಡಾವಣೆಯನ್ನು ಬೇಕಾಬಿಟ್ಟಿ ಮಾಡಿರುವುದರಿಂದ ವಿಜಯನಗರ 4ನೇ ಹಂತದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಹಂತ, ಹಂತವಾಗಿ ಸಮಸ್ಯೆ ನಿವಾರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಶೇ.60ರಷ್ಟು ಕೆಲಸ ಮುಗಿದಿದೆ. 4ನೇ ಹಂತವನ್ನು ನಗರಪಾಲಿಕೆಗೆ ಸೇರಿಸಲು ಪ್ರಯತ್ನಿಸಿದರೂ ಆಗಲಿಲ್ಲ. ಹಗಲು ರಾತ್ರಿ ಹೋರಾಟ ಮಾಡಿದ್ದರ ಫಲವಾಗಿ 4 ಪಟ್ಟಣ ಪಣಚಾಯಿತಿ, ಒಂದು ನಗರ ಸಭೆಯನ್ನು ಯಡಿಯೂರಪ್ಪನವರಿಂದ ಮಾಡಿಸಿದೆ ಎಂದರು.
ಮಹತ್ತರ ಆಸೆ ಆಕಾಂಕ್ಷೆ ಇಟ್ಟುಕೊಂಡು ಜನರು ಮನೆ ಕಟ್ಟಿಕೊಂಡಿದ್ದಾರೆ. ಆದರೆ ಸೌಲಭ್ಯಗಳಿಲ್ಲ. ಖಾಸಗಿ ಡೆವಲಪರ್‌ಗಳು ಸೈಟ್ ಮಾರಿ ಮನೆಗೆ ಹೋದರು. ಈಗ ನಮಗೆ ಸಮಸ್ಯೆ ಎದುರಾಗಿದೆ. ನಗರಸಭೆಗೆ ಕೈಗಾರಿಕೆಗಳಿಂದ ಬರುತ್ತಿದ್ದ 25 ಕೋಟಿ ತೆರಿಗೆ ನಿಂತುಹೋಗಿದೆ. ಗ್ರೇಟರ್ ಮೈಸೂರು ಮಾಡಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದರೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯನಗರ, ಬೋಗಾದಿ ಸೇರಿದಂತೆ ಹೊಸ ಪೊಲೀಸ್ ಠಾಣೆ ಆರಂಭಿಸಲು ಪೊಲೀಸ್ ಮಹಾ ನಿರ್ದೇಶಕರಿಗೆ ಹೇಳಿದ್ದೇನೆ. ಬಾಡಿಗೆ ಬಿಲ್ಡಿಂಗ್ ಕೊಟ್ಟರೆ ನಮ್ಮ ಕ್ಲಿನಿಕ್ ಹಾಗೂ ಗ್ರಂಥಾಲಯ ಮಾಡಿಸುತ್ತೆನೆ. ಆಷಾಢ ಕಳೆದ ಮೇಲೆ ಹೊಸ ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು
ಮನೆಗೆ ಯಾರೇ ಬಂದರೂ ಕೆಲಸ ಮಾಡಿಕೊಡುತ್ತೇನೆ. ಆದರೆ ಚುನಾವಣೆಯಲ್ಲಿ ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನನ್ನನ್ನು ಬೆಂಬಲಿಸುವುದಿಲ್ಲ ಎಂದು ಹಾಸ್ಯದಾಟಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಹೂಟಗಳ್ಳಿ ನಗರ ಸಭೆ ಆಯುಕ್ತ ಬಿ.ಎನ್. ಚಂದ್ರಶೇಖರ್ ಮಾತನಾಡಿ, ವಿಜಯನಗರ 4ನೇ ಹಂತವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಜನರು ಹಸಿ ಕಸ, ಒಣ ಕಸ ವಿಂಗಡಿಸಿ ಕಸದ ಗಾಡಿಗೆ ಹಾಕಿ. ಕಂಡ ಕಂಡಲ್ಲಿ ಕಸ ಹಾಕಬೇಡಿ, ರಸ್ತೆ ನಮ್ಮದು, ಚರಂಡಿ ನಮ್ಮದು, ಎಂದು ಭಾವಿಸಿ ಎಂದು ಮನವಿ ಮಾಡಿದರು.
ಆಗಾಗ್ಗೆ ರಸ್ತೆಗಳನ್ನು ಅಗೆಯಬೇಡಿ, ಮನೆ ಕಟ್ಟುವವರು ನಗರಸಭೆಯಿಂದ ಲೈಸೆನ್ಸ್ ಪಡೆದು ಮನೆಯನ್ನು ಕಟ್ಟಬೇಕು, ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಖಾತೆ ಮಾಡಿಸುವವರು ಮಧ್ಯವರ್ತಿಗಳಿಗೆ ಕೊಡಬೇಡಿ, ನೀವೇ ನೇರವಾಗಿ ಬಂದು ಖಾತೆ ಮಾಡಿಸಿಕೊಳ್ಳಿರಿ. ಸಾರ್ವಜನಿಕರು ಸಹಕರಿಸಿದರೆ ಇನ್ನೂ ಹೆಚ್ಚಿನ ಸೇವೆ ಮಾಡಲು ಸಿದ್ಧರಿದ್ದೇವೆ ಎಂದರು.
ಸಮಿತಿ ಅಧ್ಯಕ್ಷ ಎಸ್.ಜಿ.ಜಗದೀಶ್, ಸಂಚಾಲಕರಾದ ಬಿ.ಜೆ.ರಂಗೇಗೌಡ, ಟಿ.ಎಂ. ನಾರಾಯಣ್, ಎಚ್.ಎನ್. ರಾಮಚಂದ್ರ, ಟಿ.ಪಿ.ಪುರುಷೋತ್ತಮ, ನಿವೃತ್ತ ಇಂಜಿನಿಯರ್ ಧರಣೀಂದ್ರಪ್ಪ, ಎಇಇ ಮಧುಸೂದನ್, ಸಾರಿಗೆ ಅಧಿಕಾರಿ ಮಹೇಶ್, ಶಾಸಕರ ಆಪ್ತ ಸಹಾಯಕ ಹನುಮೇಶ್, ಮಂಜುನಾಥ್, ಶಾಲಿನಿ, ಶ್ರೀನಿವಾಸ್, ಕುಮಾರನಾಯಕ್, ರಾಜೇಶ್, ಕಾರ್ಯಪ್ಪ, ಪುನಿತಾಕೃಷ್ಣ, ಮುರಳೀಧರ್ ಇತರರು ಇದ್ದರು. ಈ ಸಮಾರಂಭದಲ್ಲಿ ಪೌರಕಾರ್ಮಿಕರು, ನೀರುಘಂಟಿಗಳನ್ನು ಸನ್ಮಾನಿಸಲಾಯಿತು.