

ಸರಗೂರು: ತಾಲೂಕಿನಲ್ಲಿ ಮಳೆ ಆರ್ಭಟ ಮತ್ತೆ ಮುಂದುವರಿದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗುತ್ತಿದ್ದು, ನದಿ ಪಾತ್ರದ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡಿವೆ.
ಸರಗೂರು ಮತ್ತು ಸಾಗರೆ ಮಧ್ಯೆ ಬಂಡಗಾಡಿ ಪಕ್ಕದಲ್ಲಿರುವ ಸೇತುವೆ ಮತ್ತು ರಸ್ತೆ ಮುಳುಗಡೆಗೊಂಡಿದೆ. ಬಿದರಹಳ್ಳಿ ಸರ್ಕಲ್ ಬಳಿ ಇರುವ ಆಗತ್ತೂರು ಸಾಗರೆ ಗ್ರಾಮದ ಹತ್ತಿರ ಸೇತುವೆ ಮುಳುಗಿ ಮಂಗಳವಾರ ಮಧ್ಯಾಹ್ನದಿಂದಲೇ -ಬಿದರಹಳ್ಳಿ ಬಸಾಪುರ .ಕೆಂಚನಹಳ್ಳಿ ಬೀರಂಬಳ್ಳಿ ಎನ್. ಬೇಗೂರು, ಗೆಂಡತ್ತೂರು ಬಸ್ ಸಂಚಾರ ಬಂದ್ ಆಗಿದೆ.
ಕೋಟೆಯಿಂದ ಬೀಚನಹಳ್ಳಿಗೆ ತೆರಳಲು ಕಬಿನಿ ಜಲಾಶಯದ ಮುಂಭಾಗದಲ್ಲಿ ಇರುವ ಬೋಲ್ ಸೇತುವೆ ಮೂಲಕ ಬಸ್ ಸಂಚಾರ ಮಾಡುತ್ತಿದ್ದವು. ಆದರೆ ಕೆಲ ದಿನಗಳಿಂದ ಜಲಾಶಯದಿಂದ ನದಿಗೆ ನೀರು ಬಿಡಲಾಗುತ್ತಿರುವುದರಿಂದ ಜಲಾಶಯದ ಪಕ್ಕದಲ್ಲೇ ಇರುವ ಬೋಲ್ ಸೇತುವೆ ಮುಳುಗಡೆಯಾಗಿರುವ ಕಾರಣ ಸರಗೂರು ಪಟ್ಟಣದ ಮೂಲಕ ಸಾಗರೆ-ಬಿದರಹಳ್ಳಿ ಮೂಲಕ ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ನಡೆಸುತ್ತಿತ್ತು. ಆದರೆ ಈಗ ಕಬಿನಿ ಜಲಾಶಯದದಿಂದ 80 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡುತ್ತಿರುವುದರಿಂದ ಬಿದರಹಳ್ಳಿ ಸರ್ಕಲ್, ಅಗತ್ತೂರು, ಸಾಗರೆ, ಸರಗೂರು ಪಟ್ಟಣದ ರಸ್ತೆಗಳು ಜಲಾವೃತವಾಗಿದ್ದು, ಬಸಾಪುರ, ಕೆಂಚನಹಳ್ಳಿ, ಬೀರಂಬಳ್ಳಿ ಎನ್. ಬೇಗೂರು ಹೋಗುವ ಪ್ರಯಾಣಿಕರು ಪರದಾಡುವಂತಾಗಿದೆ.
ತಗ್ಗು ಪ್ರದೇಶದ ಗ್ರಾಮಗಳ ಸೇತುವೆ ಮುಳುಗಡೆಗೊಂಡಿರುವುದರಿಂದ ಸರ್ಕಲ್ ಇನ್‌ಸ್ಪೆಕ್ಟರ್ ಎಂ. ಲಕ್ಷ್ಮೀಕಾಂತ್ ತಮ್ಮ ಸಿಬ್ಬಂದಿ ಜತೆಗೆ ಹೋಮ್ ಗಾರ್ಡಗಳನ್ನು ನಿಯೋಜನೆ ಮಾಡಲಾಗಿದ್ದು, ವಾಹನ ಸವಾರರಿಗೆ ಬದಲಿ ರಸ್ತೆಗಳ ಮೂಲಕ ತೆರಳಲು ವ್ಯವಸ್ಥೆ ಮಾಡುತ್ತಿದ್ದದ್ದು ಕಂಡುಬಂತು.
ಕಬಿನಿ ಜಲಾಶಯದಿಂದ ಹೆಚ್ಚಳ ನೀರು ಬಿಡುವುದರಿಂದ ತಗ್ಗು ಪ್ರದೇಶಗಳಲ್ಲಿ ಗ್ರಾಮದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಹಸೀಲ್ದಾರ್ ಸೂಚಿಸಿದ್ದು, ಯಾರೂ ಜಲಾಶಯದ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ಅಪಾರ ಬೆಳೆ ನಷ್ಟ: ತಾಲೂಕಿನ ಅಗತ್ತೂರು, ಸಾಗರೆ, ಬಿದರಹಳ್ಳಿ, ಕೋತ್ತೇಗಾಲ, ಸರಗೂರು ಪಟ್ಟಣ ಸೇರಿದಂತೆ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಗಿ, ಭತ್ತ, ಬಾಳೆ, ಶುಂಠಿ, ತೆಂಗು ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ ಎಂದು ರೈತರು ಅಲು ತೋಡಿಕೊಂಡಿದ್ದಾರೆ.
ಅಲ್ಲದೇ ಪ್ರತಿಸಲವೂ ಮಳೆ ಬಂದಾಗ ಕಬಿನಿ ನದಿ ಪಾತ್ರದ ಗ್ರಾಮಗಳ ಮನೆಗಳಿಗೆ ನೀರು ನುಗ್ಗುತ್ತದೆ. ಕೆಲ ಮನೆಗಳ ಗೋಡೆಗಳು ಕುಸಿದಿವೆ. ನಮಗೆ ಗ್ರಾಮ ಪಂಚಾಯಿತಿಯಿಂದ ಬದಲಿ ನಿವೇಶನ ಕೊಡಿಸಬೇಕು ಎಂದು ನದಿಪಾತ್ರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.