

ಮೈಸೂರು: ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಎಚ್.ಡಿ. ಕೋಟೆಯ ಕಬಿನಿ ಜಲಾಶಯ ಭರ್ತಿಗೆ ಕೇವಲ 3 ಅಡಿ ಮಾತ್ರ ಬಾಕಿ ಇದ್ದು, ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಯ ಬಿಡಲಾಗುತ್ತಿದೆ.
ಜಲಾಶಯಕ್ಕೆ 25,485 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 20 ಸಾವಿರ ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ. ಬೆಳಗ್ಗೆ ನದಿಗೆ 11,250 ಕ್ಯೂಸೆಕ್ ನೀರು ಹರಿಯ ಬಿಡಲಾಯಿತು. ನಂತರ 15,000 ಕ್ಯೂಸೆಕ್‌ಗೆ ಏರಿಸಲಾಯಿತು. ಮಧ್ಯಾಹ್ನ ವೇಳೆ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಅಲ್ಪ ಕುಸಿತ ಕಂಡರೂ ಸಂಜೆ ಮತ್ತೆ ಏರಿಕೆ ಕಂಡಿತು. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಜಲಾಶಯದಿಂದ ಸಂಜೆ 6ರ ನಂತರ 20 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಯಿತು.
ಗರಿಷ್ಠ 2284 ಅಡಿಗಳಷ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2281.27 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಗೆ ಕೇವಲ 3 ಅಡಿಗಳು ಮಾತ್ರ ಬಾಕಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2283.82 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.