

ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಎರಡು ದಿನಗಳಲ್ಲಿ 2 ಅಡಿ ನೀರು ಹೆಚ್ಚಳವಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು ಜಲಾಶಯ ಕಳೆಗಟ್ಟುತ್ತಿದೆ.
2,284 ಅಡಿ ಸಾಮರ್ಥ್ಯದ ಜಲಾಶಯ ಯಾವಾಗಲೂ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲೇ ಭರ್ತಿಯಾಗುತ್ತದೆ. ಅತಿಹೆಚ್ಚು ಸಮಯ ಜೂನ್ ಅಂತ್ಯದಲ್ಲೇ ಭರ್ತಿಯಾಗಿ ಜುಲೈ ಆರಂಭದಲ್ಲೇ ಬಾಗೀನ ಸ್ವೀಕರಿಸಿದೆ. ಕಳೆದ ವರ್ಷ ಕೇರಳದ ವಯನಾಡು ಪ್ರಾಂತ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದೆ ನಿಗದಿತ ಸಮಯದಲ್ಲಿ ಡ್ಯಾಂ ಭರ್ತಿಯಾಗಲಿಲ್ಲ. ಆದರೂ, ಆಗಸ್ಟ್ ವೇಳೆಗೆ ಭರ್ತಿಯಾಗಿ ತಮಿಳುನಾಡಿಗೂ ನೀರು ಹರಿಸಲಾಗಿತ್ತು. ಈ ಬಾರಿ ಮೇ ಮೂರನೇ ವಾರದಲ್ಲೇ ಕೇರಳದ ವಯನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಎರಡು ದಿನದಲ್ಲೇ ಜಲಾಶಯಕ್ಕೆ ಅರ್ಧ ಟಿಎಂಸಿ ನೀರು ಹರಿದು ಬಂದಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಜುಲೈ ಮೂರನೇ ವಾರದಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಮೇ 21 ರಂದು ಬೆಳಗ್ಗೆ 2256.96 ಅಡಿಗಳಷ್ಟಿದ್ದ ಜಲಾಶಯದ ನೀರಿನ ಮಟ್ಟ ಮೇ 23ರ ಬೆಳಗ್ಗೆ ವೇಳೆಗೆ 2258.29 ಅಡಿಗಳಿಗೆ ಏರಿಕೆಯಾಗಿದೆ. ಮೇ 21 ರಂದು 841 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಗುರುವಾರ 4356 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ 300 ಕ್ಯೂಸೆಕ್ ಹೊರಹರಿವು ಇದೆ. 9.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 6.70 ಟಿಎಂಸಿ ನೀರು ಸಂಗ್ರಹವಾಗಿದೆ.