ಕಬಿನಿ, ನುಗು ಪ್ರವಾಹ ಭೀತಿ: ಜಿಪಂ ಸಿಇಒ ಗಾಯತ್ರಿ ಪರಿಶೀಲನೆ

mysore
Published on

ಮೈಸೂರು: ಸರಗೂರು ತಾಲೂಕಿನ ನುಗು ಜಲಾಶಯ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಜಿಪಂ ಸಿಇಒ ಕೆ.ಎಂ.ಗಾಯತ್ರಿ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.


ಕೇರಳ ಹಾಗೂ ಎಚ್.ಡಿ.ಕೋಟೆ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ಹೊರಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಬಹುದು. ಹೀಗಾಗಿ ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅರಿವು ಮೂಡಿಸಬೇಕು. ಅಗತ್ಯ ಇದ್ದರೆ ಸ್ಥಳಾಂತರ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಕಬಿನಿ ಜಲಾಶಯದಲ್ಲಿನ ನೀರು ಬಿಡುಗಡೆ ಗೇಟ್ ಕೊಠಡಿ ಸ್ವಲ್ಪ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ಕೊಠಡಿಯನ್ನು ದುರಸ್ತಿ ಮಾಡಿಸಿಕೊಳ್ಳುವಂತೆ ಹಾಗೂ ಜಲಾಶಯದ ಬಳಿ ಸಾರ್ವಜನಿಕರು ಬಾರದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ತುಂಬುಸೋಗೆ ಬಳಿಯ ಸೇತುವೆ ಬಳಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಹೆಚ್ಚುವರಿ ನೀರು ಬಿಟ್ಟರೆ ಸೇತುವ ಮುಳುಗುವ ಭೀತಿ ಇದ್ದು, ಸಾರ್ವಜನಿಕರು ಸೇತುವೆ ಬಳಿ ತೆರಳದಂತೆ ಕ್ರಮ ವಹಿಸಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿಗಳು (ಅಭಿವೃದ್ಧಿ) ಡಾ. ಎಂ.ಕೃಷ್ಣರಾಜು, ಸರಗೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ಎಚ್.ಡಿ ಕೋಟೆ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಧರಣೇಶ್, ಕಾರ್ಯಪಾಲಕ ಇಂಜಿನಿಯರ್ ರಂಜಿತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋವಿಂದನಾಯಕ, ಸಹಾಯಕ ನಿರ್ದೇಶಕ (ಗ್ರಾಉ) ಮಹದೇವಸ್ವಾಮಿ, ಪಿಡಿಒಗಳಾದ ಪ್ರಭಾಕರ್, ಪರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net