

ಹನೂರು : ಕೃಷಿ ಅಭಿವೃದ್ಧಿಗಾಗಿ ಎಂ.ಎಸ್ ಸ್ವಾಮಿನಾಥನ್ ವರದಿ ಜಾರಿ ಮಾಡುವಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರೈತರಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ತರಬೇತಿ ಹಾಗೂ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.
ರೈತ ದೇಶದ ಬೆನ್ನೆಲುಬು. ಸರ್ಕಾರದ ಯೋಜನೆಗಳು ಅಗತ್ಯವಾಗಿದೆ. ಆದರೆ ರೈತರನ್ನು ಸಬಲೀಕರಣಗೊಳಿಸುವ ಯೋಜನೆಗಳು ಜಾರಿಯಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 2025ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ್ದರು. ಆದರೆ ಕೃಷಿ ಉತ್ಪಾದನಾ ವೆಚ್ಚ ದ್ವಿಗುಣಗೊಂಡಿದೆ. ಆದರೆ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಎಂ.ಎಸ್ ಸ್ವಾಮಿನಾಥನ್ ವರದಿಯಲ್ಲಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿ ಬೆಲೆ ನಿಗಧಿಪಡಿಸಬೇಕೆಂದು ವರದಿ ನೀಡಿದೆ. ಆದರೆ ಈ ಕೆಲಸವಾಗಿಲ್ಲ. ಇದರಿಂದ ರೈತರಿಗೆ ಅನ್ಯಾಯವೆಸಗಿದಂತಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಮನಗಂಡು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು. ರಾಗಿ, ಭತ್ತ, ಮುಸುಕಿನ ಜೋಳ ಅರಿಶಿಣ, ಸೂರ್ಯಕಾಂತಿ, ಹೆಸರುಕಾಳು ಹಾಗು ತೊಗರಿಗೆ ವರ್ಷ ಪೂರ್ತಿ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು. ಪ್ರೊ. ಎಸ್ ಶಿವರಾಜಪ್ಪ, ನಿವೃತ್ತ ಪ್ರಾಧ್ಯಾಪಕ ಮಹದೇವಯ್ಯ, ಶಿವರುದ್ರಪ್ಪ, ಜಿಲ್ಲಾಧ್ಯಕ್ಷ ನಾಗರಾಜು, ಸಂಘ ಖಜಾಂಚಿ, ಸಂಚಾಲಕ ರಾಜಣ್ಣ, ಮಹೇಂದ್ರ ಹಾಗೂ ಇನ್ನಿತರರು ಇದ್ದರು.