ಸೋಲು, ಗೆಲುವು ಸ್ವೀಕರಿಸುವ ಗುಣ ಅವಶ್ಯ : ಸುದರ್ಶನ ಜೋಯಿಸ ಕಿವಿಮಾತು

Published on

ಸುಬ್ರಹ್ಮಣ್ಯ: ಕ್ರೀಡಾಳುಗಳಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಅಗತ್ಯವಾಗಿ ಇರಬೇಕು. ಇದು ಶ್ರೇಷ್ಠ ಸಾಧನೆಯತ್ತ ಕೊಂಡೊಯ್ಯುತ್ತದೆ ಎಂದು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಸಂಚಾಲಕ ಸುದರ್ಶನ ಜೋಯಿಸ ಹೇಳಿದರು.

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಮತ್ತು ವೇದವ್ಯಾಸ ವಿದ್ಯಾಲಯ ಆಶ್ರಯದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಬಡ್ಡಿ ತರಬೇತಿ ಶಿಬಿರದ ಸಮಾರೋಪ ಸವಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಸಮಾರೋಪ ಭಾಷಣ ಮಾಡಿದರು. ಕಬಡ್ಡಿ ತರಬೇತುದಾರ ಮೂರ್ತಿ ಕೊಂಬಾರು ಮತ್ತು ರಾಜ್ಯಮಟ್ಟದಲ್ಲಿ ಮಿಂಚಿದ ಕ್ರೀಡಾ ಸಾಧಕರನ್ನು ಗೌರವಿಸಲಾಯಿತು. ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ನವನೀತ ಕ್ರೀಡಾ ಸಂಘದ ಅಧ್ಯಕ್ಷ ಮಧುಸೂದನ ಕೈಕುರೆ, ಯುವಕ ಮಂಡಲದ ಉಪಾಧ್ಯಕ್ಷ ಕಮಲಾಕ್ಷ ಬಿಳಿನೆಲೆ, ಕಬಡ್ಡಿ ತರಬೇತುದಾರ ಮೂರ್ತಿ ಕೊಂಬಾರು, ವೇದವ್ಯಾಸ ವಿದ್ಯಾಲಯ ಮುಖ್ಯಶಿಕ್ಷಕ ಪ್ರಶಾಂತ್ ಬಿ. ಮೊದಲಾದವರಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ದಿನೇಶ್ ಕುಂದರ್ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿನಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net