ಅಣ್ಣಿಗೇರಿ ತಂಡಕ್ಕೆ ಪ್ರಥಮ ಸ್ಥಾನ

10-gdg-3
Published on

ಗದಗ: ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಶ್ರೀ ಸೂಗಿರೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ 34ನೇ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಅಮೃತೇಶ್ವರ ತಂಡ ಪ್ರಥಮ ಸ್ಥಾನ ಬಾಚಿಕೊಂಡಿತು.

ಶ್ರೀ ಸ್ವಾಮಿ ವಿವೇಕಾನಂದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಲಕ್ಕುಂಡಿ ತಂಡ ದ್ವಿತೀಯ ಸ್ಥಾನ, ಬಾಗಲಕೋಟೆ ಜಿಲ್ಲೆಯ ನೆಲವಿಗಿಯ ಸ್ನೇಹಜೀವಿ ತಂಡವು ಮೂರನೇ ಸ್ಥಾನ ಹಾಗೂ ಅಂತೂರ-ಬೆಂತೂರಿನ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಹುಯಿಲಗೋಳದ ಸ್ವಾಮಿ ವಿವೇಕಾನಂದ ತಂಡ ಹಾಗೂ ಅಂತೂರ ಬೆಂತೂರಿನ ತಂಡದ ಮಧ್ಯೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯ ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಎರಡೂ ತಂಡಗಳು ಸಮ ಅಂಕ ಪಡೆದು ಮತ್ತೆ ಕುತೂಹಲ ಮೂಡಿಸಿದ್ದವು. ಬಳಿಕ ಬೆಂತೂರಿನ ತಂಡ ಆತಿಥೇಯ ತಂಡವನ್ನು ಎರಡು ಅಂಕಗಳಿಂದ ಮಣಿಸಿ ಉಪಾಂತ್ಯ ಪ್ರವೇಶಿಸಿತು.

ಪ್ರಥಮ ಸ್ಥಾನ ಪಡೆದ ಅಣ್ಣಿಗೇರಿಯ ಅಮೃತೇಶ್ವರ ತಂಡಕ್ಕೆ 15 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಯಿತು. ಲಕ್ಕುಂಡಿ ತಂಡಕ್ಕೆ 10 ಸಾವಿರ ರೂ.ನಗದು, ಬಾಗಲಕೋಟ ಜಿಲ್ಲೆಯ ನೆಲವಿಗಿಯ ಸ್ನೇಹಜೀವಿ ತಂಡಕ್ಕೆ 7 ಸಾವಿರ ರೂ. ನಗದು ಮತ್ತು ಬೆಂತೂರಿನ ತಂಡಕ್ಕೆ 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ಇದೇ ಸಂದರ್ಭದಲ್ಲಿ ಎಎಸ್​ಐ ಹುದ್ದೆಗೆ ಬಡ್ತಿ ಪಡೆದಿರುವ ಗ್ರಾಮದ ಆರ್.ಎಚ್. ನೀರಲಗಿ, ಬಹುಮಾನ ಪ್ರಾಯೋಜಕರಾದ ಅಶೋಕ ಹದ್ಲಿ, ಪ್ರಕಾಶ ಕರಿಮೇರಿ, ಸಂಗಪ್ಪ ಮಾರನಬಸರಿ,ರಮೇಶ ಬೆಳಗಟ್ಟಿ, ಶರೀಫ ಹೆಬ್ಬಳ್ಳಿ, ಮಿಲಿಂದ ಕಾಳೆ, ದೇವಪ್ಪ ಬನ್ನಿಕೊಪ್ಪ, ಚನ್ನಬಸಪ್ಪ ಹೂಗಾರ, ಪಂಚಾಕ್ಷರಯ್ಯ ಹಿರೇಮಠ ಮತ್ತಿತರರನ್ನು ಸನ್ಮಾನಿಸಲಾಯಿತು.

ಗದಗ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹದೇವ ಗಣಾಚಾರಿ, ಪಿ.ಸಿ. ಕಾಳೆ, ಹಿರಿಯ ಕಬಡ್ಡಿ ಪಟುಗಳಾದ ಕೆ.ಎನ್. ಸೊರಟೂರ, ರಾಮಣ್ಣ ನೀರಲಗಿ, ಹೇಮಂತ ದಾಸರ, ಎಸ್.ಎನ್. ಸೊರಟೂರ, ಶ್ರೀಕಾಂತ ಹಟ್ಟಿ, ಅಶೋಕ ಬೆಳಗಟ್ಟಿ, ಎನ್.ಜಿ. ಹೂಗಾರ, ಬಸವರಾಜ ರೋಣದ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net