

ಕುಂದಗೋಳ: ದೇಶೀಯ ಕ್ರೀಡೆಗಳನ್ನು ಪೋತ್ಸಾಹಿಸುವ ಸಲುವಾಗಿ ಸಂಸದ ಪ್ರಲ್ಹಾದ ಜೋಶಿಯವರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಫೆ. 10 ಹಾಗೂ 11ರಂದು ಕುಂದಗೋಳ ಪಟ್ಟಣದ ಹರಭಟ್ಟ ಕಾಲೇಜು ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆಡೆಗಳಲ್ಲಿ ಕ್ರೀಡಾ ಮಹೋತ್ಸವ ಹಮ್ಮಿಕೊಂಡಿರುವಂತೆ ಫೆ. 10ರಂದು ಬೆಳಗ್ಗೆ 9 ಗಂಟೆಗೆ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಚಾಲನೆ ನೀಡುವರು. ಫೆ. 11ರಂದು ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಸಚಿವ ಪ್ರಲ್ಹಾದ ಜೋಶಿ ಬಹುಮಾನ ನೀಡುವರು ಎಂದರು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 40 ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 20 ಸಾವಿರ ರೂ., ತೃತೀಯ 10 ಸಾವಿರ ರೂ. ಹಾಗೂ ಚತುರ್ಥ ತಂಡಕ್ಕೆ 10 ಸಾವಿರ ರೂ. ಬಹುಮಾನವಾಗಿ ನೀಡಲಾಗುವುದು. ಉತ್ತಮ ರೈಡರ್, ಉತ್ತಮ ಕ್ಯಾಚರ್, ಉತ್ತಮ ಆಲ್ರೌಂಡರ್ಗಳಿಗೆ ತಲಾ 5 ಸಾವಿರ ರೂ. ಹಾಗೂ ವೈಯಕ್ತಿಕವಾಗಿ ಪ್ರತಿ ತಂಡಕ್ಕೂ 2500 ರೂ.ಗಳನ್ನು ಪ್ರೋತ್ಸಾಹಧನ ನೀಡಲಾಗುವುದು ಎಂದರು. ಈಗಾಗಲೆ 50 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಫೆ. 8 ರವರೆಗೆ ಆಸಕ್ತ ತಂಡಗಳಿಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಸಂಘಟನೆ ವತಿಯಿಂದ ಆಟಗಾರರಿಗೆ ಸಮವಸ್ತ್ರ, ಊಟ ಹಾಗೂ ಉಪಾಹಾರ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ತಾಲೂಕಾಧ್ಯಕ್ಷ ರವಿಗೌಡ ಪಾಟೀಲ, ಉಮೇಶ ಕುಸುಗಲ್, ಬಿ.ಬಿ. ಗಂಗಾಧರಯ್ಯಮಠ, ಹಜರತಲಿ ಜೋಡಮನಿ, ಡಿ.ವೈ. ಲಕ್ಕನಗೌಡ್ರ, ಪ್ರಕಾಶ ಕೂಬಿಹಾಳ, ಉಮೇಶ ಹೆಬಸೂರ, ಬಸವರಾಜ ಕೊಪ್ಪದ, ಬಿ.ಟಿ. ಗಂಗಾಯಿ, ಭರಮಪ್ಪ ಮುಗಳಿ, ಶ್ರೀಕಾಂತ ಕಲಾಲ, ರಾಜಣ್ಣ ಶಿವಳ್ಳಿ, ಎಸ್.ಎನ್. ಪಾಟೀಲ, ಫಕ್ಕಜ್ಜ ಕೋರಿ, ಭರಮಗೌಡ ದ್ಯಾವನಗೌಡ್ರ ಸುದ್ದಿಗೋಷ್ಠಿಯಲ್ಲಿದ್ದರು.