ನರೇಗಾ ಸ್ಥಳದಲ್ಲಿ ಕಬಡ್ಡಿ- ಖೋಖೋ

narega kabaddi
Published on

ಗದಗ: ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರೆ ಕಬಡ್ಡಿ, ಖೋಖೋ ಆಟ ಕಣ್ತುಂಬಿಕೊಳ್ಳಬಹುದು.

ಉದ್ಯೋಗ ಖಾತರಿ ಎಂದರೆ ಬರೀ ಕೂಲಿ ಕೆಲಸವಲ್ಲ, ಮನರಂಜನೆಗೂ ಅಲ್ಲಿ ಅವಕಾಶವಿದೆ. ಹೀಗಾಗಿ ಕಾರ್ಮಿಕರು ಆಸಕ್ತಿಯಿಂದಲೇ ಕೆಲಸದಲ್ಲಿ ತೊಡಗುತ್ತಿದ್ದಾರೆ.

ಏಪ್ರಿಲ್ ತಿಂಗಳ ಮೊದಲ ದಿನದಿಂದಲೇ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ನರೇಗಾ ಕಾಮಗಾರಿಗಳು ಆರಂಭವಾಗಿವೆ.

ರೋಣ ತಾಲೂಕಿನಲ್ಲಿ ಪ್ರತಿ ದಿನ 16 ಸಾವಿರಕ್ಕೂ ಹೆಚ್ಚು ಕೂಲಿಕಾರ್ಮಿಕರು ನರೇಗಾ ಯೋಜನೆಯಡಿ ಬದುವು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದಾರೆ.

ಕೂಲಿ ಕಾರ್ಮಿಕರಿಗೆ ಕೆಲಸದ ದಣಿವು ತಣಿಸಲು ಆಟೋಟಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕಾರ್ಮಿಕರು ಖುಷಿಯಿಂದಲೇ ಆಟೋಟಗಳಲ್ಲಿ ತೊಡಗಿದ್ದಾರೆ.

ಹೆಚ್ಚು ಮಾನವ ದಿನಗಳ ಸೃಜನೆ ಮಾಡಲು ರೋಣ ತಾಪಂ ಈ ವಿಭಿನ್ನ ನಡೆ ಅನುಸರಿಸಿದೆ. ಕೆಲಸದ ನಡುವೆ ಬಿಡುವಿನ ಸಮಯದಲ್ಲಿ ದೇಸಿ ಆಟಗಳನ್ನು ಆಡಿಸಲಾಗುತ್ತಿದೆ. ಜಾನಪದ ಹಾಡುಗಳನ್ನು ಹಾಡಿಸುವ ಮೂಲಕ ಅವರ ಉಲ್ಲಾಸ ಹೆಚ್ಚಿಸಲಾಗುತ್ತಿದೆ.

ರೋಣ ತಾಲೂಕಿನ ಅಬ್ಬಿಗೇರಿ ಹಾಗೂ ಸವಡಿ, ಮೆಣಸಗಿ, ಅಮರಗೋಳ ಗ್ರಾಮಗಳು ಇಂತಹ ವಿಭಿನ್ನ ಚಟುವಟಿಕೆಗಳ ಮೂಲಕ ಗಮನ ಸೆಳೆದಿವೆ.

ಸವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿದಿನ 2 ಸಾವಿರಕ್ಕೂ ಅಧಿಕ ಜನ ಬಂದರೆ, ಅಬ್ಬಿಗೇರಿ ಗ್ರಾಮ ಪಂಚಾಯಿತಿಯಲ್ಲಿ 3,700ಕ್ಕೂ ಅಧಿಕ ಜನರು ನರೇಗಾ ಕಾಮಗಾರಿಯಲ್ಲಿ ತೊಡಗಿದ್ದಾರೆ. ಇನ್ನಷ್ಟು ಜನರನ್ನು ಸೆಳೆಯಲು ಮನರಂಜನೆಗೆ ಒತ್ತು ನೀಡಲಾಗಿದೆ.

‘ಸಮಾನ ಕೆಲಸ ಸಮಾನ ಕೂಲಿ‘ ಎಂಬುದನ್ನು ಸಾರಲು ತಾಪಂ ಇಒ ಹಾಗೂ ಅಬ್ಬಿಗೇರಿ, ಸವಡಿ, ಮೆಣಸಗಿ, ಅಮರಗೋಳ ಪಿಡಿಒಗಳು ಈ ಹೆಜ್ಜೆ ಇರಿಸಿದ್ದಾರೆ.

ಕೂಲಿಗೆ ಬರುವ ಮಹಿಳೆಯರು ಮನೆಯಂತೆಯೇ ಎಲ್ಲರೊಂದಿಗೆ ಬೆರೆತು ಆಟವಾಡುತ್ತಿದ್ದಾರೆ. ಸೋಬಾನೆ ಪದ, ಹಂತಿ ಪದಗಳನ್ನು ಸಾಮೂಹಿಕವಾಗಿ ಹಾಡುತ್ತಿದ್ದಾರೆ.

ಇದರಿಂದ ಕೆಲಸದ ದಣಿವು ಕರಗಿ ಮನಸು ಉಲ್ಲಾಸಗೊಳ್ಳುತ್ತಿದೆ. ಜತೆಗೆ ಇತರ ಗ್ರಾಪಂಗಳಿಗೂ ಈ ಸಂಗತಿ ಪ್ರೇರಣೆಯಾಗಿದೆ.

ಪುರುಷರು ಕಬಡ್ಡಿ ಆಟದ ಮೂಲಕ ಗಮನ ಸೆಳೆದಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಇದರಿಂದ ಆರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಜನರು ನರೇಗಾ ಯೋಜನೆಯತ್ತ ಹೆಚ್ಚು ಗಮನಹರಿಸಲು ಇದು ಸಹಕಾರಿಯಾಗಿದೆ.

ಒಡ್ಡು ಹಾಕಿದ ಮೇಲೆ ಟೈಮ್ ಇರುತ್ತದೆ. ಮನೆಯಲ್ಲಿ ಅತ್ತಿ-ಮಾವ, ಬಂಧು- ಬಳಗ ಇರುತ್ತಾರೆ. ಸಣ್ಣ ಹುಡುಗರಂತೆ ಆಟವಾಡಿದರೆ ಸರಿಯಾಗದು. ಇಲ್ಲಿ ಹೊಲದಾಗ ನಮ್ಮ ಯಜಮಾನರು, ಗೆಳೆತ್ಯಾರು ಇರ್ತಾರ, ಮನಸು ಬಿಚ್ಚಿ ಆಟ ಆಡ್ತೀವಿ. ಇದು ಭಾಳ ಖುಷಿ ಕೊಡುತ್ತ.-ನಿರ್ಮಲಾ ಕಂಬಳಿ, ನರೇಗಾ ಕೂಲಿಕಾರ್ಮಿಕರು

ಸಾಮೂಹಿಕ ಕಾಮಗಾರಿಗಳ ಸ್ಥಳಗಳು ಕೇವಲ ಬೆವರು ಹರಿಸಿ ದುಡಿಯುವ ತಾಣಗಳು ಎಂದೇ ಭಾವಿಸಲಾಗಿದೆ. ಮನಸಿಗೆ ನೆಮ್ಮದಿ, ಚೈತನ್ಯ ಒದಗಿಸುವ ಸಾಂಸ್ಕೃತಿಕ ಲೋಕವನ್ನು ಇಲ್ಲಿ ಏಕೆ ಅನಾವರಣಗೊಳಿಸಬಾರದು, ಆ ಮೂಲಕ ದುಡಿಮೆಯ ಶ್ರಮವನ್ನು ನಿವಾರಿಸಿಕೊಳ್ಳುವಲ್ಲಿ ಯಾಕೆ ಒಂದು ಹೆಜ್ಜೆ ಇಡಬಾರದು ಎಂಬ ಆಲೋಚನೆಯಿಂದ ಈ ಉಲ್ಲಾಸಕರ ವಾತಾವರಣವನ್ನು ಸೃಷ್ಟಿಸಲಾಗಿದೆ. ಜನಪದ ಸಾಹಿತ್ಯ, ದೇಸಿ ಕ್ರೀಡೆಗಳು ಮೂಲೆಗುಂಪು ಆಗುತ್ತಿವೆ. ಕೆಲಸದ ಸ್ಥಳದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸುವುದು ಹಾಗೂ ಖುಷಿಯಿಂದ ಕೂಲಿಗೆ ಬರುವವರ ಸಂಖ್ಯೆ ಹೆಚ್ಚಿಸಲು ಈ ಮಾರ್ಗ ಕಂಡುಕೊಳ್ಳಲಾಗಿದೆ. -ರವಿ. ಎ.ಎನ್. ರೋಣ ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net