ಜಿಲ್ಲೆಗೊಂದು ಕ್ರೀಡೆಗೆ ಕಬಡ್ಡಿ ಆಯ್ಕೆ: ಕ್ರೀಡಾಪಟುಗಳಿಗೆ ತರಬೇತಿ ನೀಡಲು ನಿರ್ಧಾರ

2
Published on

ಮಂಡ್ಯ: ಜಿಲ್ಲೆಗೊಂದು ಕ್ರೀಡೆ ಆಯ್ಕೆ ಕುರಿತು ಚರ್ಚಿಸಲು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಅಂತಿಮವಾಗಿ ಗ್ರಾಮೀಣ ಕ್ರೀಡೆ ಕಬಡ್ಡಿಗೆ ಸಂಪೂರ್ಣ ಬೆಂಬಲ ಸಿಕ್ಕಿತು.

ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್ ಮತ್ತು ಫುಟ್ಬಾಲ್ ಬಗ್ಗೆ ಚರ್ಚೆಯಾಯಿತು. ಆದರೆ ಕಬಡ್ಡಿ ಕಡೆಗೆ ಹೆಚ್ಚಿನ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಡಿಸಿ ಮಾತನಾಡಿ, ದೇಸಿ ಕ್ರೀಡೆ ಕಬಡ್ಡಿ ಸಾಕಷ್ಟು ಹೆಗ್ಗಳಿಕೆ ಜತೆಗೆ ಹೆಸರನ್ನೂ ತಂದುಕೊಟ್ಟಿದೆ. ಗ್ರಾಮೀಣ ಜನರಿಗೆ ಬಹಳ ಇಷ್ಟವಾದ ಕಬಡ್ಡಿ ಕ್ರೀಡೆಯು ಜಿಲ್ಲೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಒಪ್ಪಿಗೆಯಂತೆ ಆಯ್ಕೆ ಮಾಡಲಾಗಿದೆ ಎಂದರು.

ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಆಟಗಾರರು ಜಿಲ್ಲೆಯಲ್ಲಿದ್ದಾರೆ. ಹಾಗಾಗಿ ಕಬಡ್ಡಿ ಆಯ್ಕೆ ಸೂಕ್ತ ಎನ್ನುವ ಸಹಮತ ವ್ಯಕ್ತವಾಯಿತು. ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಕ್ರೀಡೆಗಳನ್ನು ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಸಶಕ್ತಗೊಳಿಸುವುದು. ಹಾಗೂ ಆಯ್ಕೆ ಮಾಡಲಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೋಬಳಿಯಿಂದ ಜಿಲ್ಲಾಮಟ್ಟದವರೆಗೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಸನ್ನದ್ದಗೊಳಿಸುವುದು ಜಿಲ್ಲೆಗೊಂದು ಕ್ರೀಡೆ ಎಂಬುದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ಕ್ರೀಡಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net