

ಚನ್ನರಾಯಪಟ್ಟಣ: ಕಬಡ್ಡಿ ದೇಶೀಯ ಕ್ರೀಡೆಯಾಗಿ ತನ್ನದೇ ವೈಶಿಷ್ಟೃತೆ ಹೊಂದಿದ್ದು, ಆಟಗಾರರಿಗೆ ದೈಹಿಕ ಶಕ್ತಿ ವೃದ್ಧಿಗೆ ಸಹಾಯಕವಾಗುವ ಜತೆಗೆ ಚತುರತೆ ಬೆಳೆಸುತ್ತದೆ ಎಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ವಿ.ಮಹೇಶ್ ತಿಳಿಸಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ತಾಲೂಕು ರೋಗ್ಯಾಧಿಕಾರಿಗಳ ಕಚೇರಿ, ಅದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಯುವಜನೋತ್ಸವ 2024-25 ಅಂಗವಾಗಿ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯ ಮಲೆನಾಡು ವಲಯ ಮಹಿಳೆಯರ ವಿಭಾಗದ ಕಬಡ್ಡಿ, ವಾಲಿಬಾಲ್ ಹಾಗೂ ಟೆನಿಕಾಯ್ಟ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಬಡ್ಡಿ ಆಟವು ಪುರುಷ ಪ್ರಧಾನವಾಗಿತ್ತು. ಇಂದು ಕಬಡ್ಡಿ ಆಟದಲ್ಲಿ ಮಹಿಳೆಯರು ಸಕ್ರಿಯರಾಗಿರುವ ಮೂಲಕ ನೇಪಥ್ಯಕ್ಕೆ ಸರಿಯುವ ಹಂತದಲ್ಲಿದ್ದ ಕಬಡ್ಡಿಯು ಮತ್ತೆ ತನ್ನ ವೈಭವ ಉಳಿಸಿಕೊಂಡಿದೆ ಎಂದರು.
ಸೋಲು-ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೆ ಕ್ರೀಡೆಯಲ್ಲಿ ಸಕ್ರಿಯರಾಗುವುದು, ಕ್ರೀಡಾಸ್ಫೂರ್ತಿ ಮೆರೆಯುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಲಕ್ಷಣ. ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದರಿಂದ ಕ್ರೀಡಾಪಟು ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಕ್ರೀಡೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಕ್ರೀಡೆಗಳಲ್ಲಿ ಪ್ರತಿಯೊಬ್ಬರೂ ಸಕ್ರಿಯರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಏಡ್ಸ್ ಮತ್ತು ಪ್ರತಿಬಂಧಕ ಘಟಕದ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ಮಾತನಾಡಿ, ಎಚ್‌ಐವಿ, ಏಡ್ಸ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಎಚ್‌ಐವಿ, ಏಡ್ಸ್ ರೋಗಿಗಳ ಸಂಖ್ಯೆಯ ಶೂನ್ಯವಾಗಿಸಲು ಸರ್ಕಾರ ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹೆಚ್ಚಾಗಿ 15 ರಿಂದ 25 ವರ್ಷದೊಳಗಿನ ಯುವ ಜನಾಂಗ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಕೈಗೊಂಡು ಪ್ರತಿಯೊಬ್ಬರಿಗೂ ಅರಿವು ಮೂಡಿಸಲಾಗುತ್ತಿದೆ ಎಂದರು.
ಮಹಿಳಾ ಕಬಡ್ಡಿ ತಂಡದ ಸದಸ್ಯರು ಬಹಳಷ್ಟು ಉತ್ಸಾಹದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಜಿಲ್ಲೆಯನ್ನು ಎಚ್‌ಐವಿ, ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಮಾಡುವ ಪ್ರತಿಯೊಬ್ಬರೂ ಖಾಯಿಲೆಯ ಬಗ್ಗೆ ತಿಳಿದುಕೊಂಡು ತಮ್ಮ ಹಳ್ಳಿಗಳು ಮತ್ತು ನಗರ ಪ್ರದೇಶದ ವಿವಿಧೆಡೆ ಅರಿವು ಮೂಡಿಸಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸುವಂತೆ ಸಲಹೆ ನೀಡಿದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ವಿರುದ್ಧ ಜಾಗೃತಿ ಕುರಿದಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಎಂ.ಕೆ. ಮಂಜುನಾಥ್ ವಹಿಸಿದ್ದರು. ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಕೆಂಚೇಗೌಡ, ಮಲೆನಾಡು ವಲಯದ ಸಂಚಾಲಕ ಮುರಳಿ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿದ್ದರಾಜು, ದೈಹಿಕ ಶಿಕ್ಷಣ ನಿರ್ದೇಶಕ ಜೆ.ಭಾಸ್ಕರ್, ಚನ್ನಪಟ್ಟಣ ಲಯನ್ಸ್ ಸಂಸ್ಥೆಯ ಖಜಾಂಚಿ ಡಿ.ಕೆ.ಮಂಜುನಾಥ್, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಸಿಬ್ಬಂದಿ ಎಚ್.ಎಂ.ಮೋಹನ್, ಮಹದೇವ್, ಇಮ್ರಾನ್, ಜಯಣ್ಣ, ನೇತ್ರಾವತಿ, ಭಾಗ್ಯಾ, ಸುಧಾ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.