

ಮದ್ದೂರು: ಶತಮಾನಗಳ ಇತಿಹಾಸವಿರುವ ಕಬಡ್ಡಿ ನಿಜಕ್ಕೂ ಗ್ರಾಮೀಣ ಭಾಗದ ಕ್ರೀಡೆ. ಇದು ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಗೊಳಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೈಸೂರು ವಿಶ್ವವಿದ್ಯಾ ನಿಲಯ ಮಟ್ಟದ ಮಾಂಡವ್ಯ ವಲಯದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
4 ಸಾವಿರ ವರ್ಷಗಳ ಹಿಂದೆ ಶ್ರೀ ಕೃಷ್ಣ ಪರಮಾತ್ಮ, ಗೌತಮ ಬುದ್ಧ ಕಬಡ್ಡಿ ಆಡಿದ ರೋಚಕ ಇತಿಹಾಸವಿದೆ ಎಂದ ಅವರು, 5 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡು ಇಂದು ಭಾರತದ ಅತ್ಯಂತ 2ನೇ ದೊಡ್ಡ ಕ್ರೀಡೆಯಾಗಿ ಬೆಳೆದು ಬಂದಿದೆ ಎಂದು ವಿಶ್ಲೇಷಿಸಿದರು.
ಗ್ರಾಪಂ ಸದಸ್ಯ ಕುಮಾರ್ ಕೊಪ್ಪ ಮಾತನಾಡಿ, ಕಬಡ್ಡಿ ವಿದ್ಯಾರ್ಥಿಗಳಲ್ಲಿ ಬಾಂಧವ್ಯ ಮತ್ತು ಭಾವೈ ಕ್ಯತೆಯನ್ನು ಮೂಡಿಸುತ್ತದೆ. ಅದು ರಾಷ್ಟ್ರೀಯ ಭಾವೈಕ್ಯತೆಯ ರಹದಾರಿ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಅಣ್ಣಯ್ಯ ತೈಲೂರು ವಹಿಸಿದ್ದರು. ಕೊಪ್ಪ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಮಂಗೇಗೌಡ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪಾಜಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್, ರಾಹುಲ್ ಕ್ರೀಡಾ ಬಳಗದ ಅಧ್ಯಕ್ಷ ಅನಿಲ್‌ಕುಮಾರ್, ಕಾರ್ಯಕ್ರಮದ ಸಂಯೋಜಕ ಶ್ರೀನಿವಾಸ್ ಇದ್ದರು.
ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾಂಡವ್ಯ ವಲಯದ ಮೈಸೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತಿ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಪುರುಷರ ಕಬಡ್ಡಿ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತೀ ಪದವಿ ಕಾಲೇಜು ಪಾಂಡವಪುರದ ವಿಜಯ ಪದವಿ ಕಾಲೇಜನ್ನು ಮಣಿಸಿ, ಟ್ರೋಫಿ ಮತ್ತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಮಹಿಳೆಯರ ಫೈನಲ್ ಪಂದ್ಯಾವಳಿಯಲ್ಲಿ ಮಂಡ್ಯ ಮಹಿಳಾ ಕಾಲೇಜನ್ನು ಮಣಿಸಿ, ಭಾರತಿ ಕಾಲೇಜು ಟ್ರೋಫಿ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿತು. ಪ್ರಶಸ್ತಿ ವಿಜೇತರನ್ನು ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಕಾಲೇಜಿನ ಸಿಬ್ಬಂದಿ ಅಭಿನಂದಿಸಿದರು.