

ಕುಶಾಲನಗರ: ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ವತಿಯಿಂದ ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಬಿ. ಜಿ.ಎಸ್-ಕಪ್ ಹೊನಲು ಬೆಳಕಿನ ಕಬಡ್ಡಿ ಹಬ್ಬ ಮೇ೧೩, ೧೪ ಮತ್ತು ೧೫, ರಂದು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಕೊಡಗು ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಷನ್ ಕುಶಾಲನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯ ಮಟ್ಟದ ಸೀನಿಯರ್ಸ್ ಚಾಂಪಿಯನ್‌ಶಿಪ್ ರಾಜ್ಯಮಟ್ಟದ ಪ್ರೊ.ಕಬಡ್ಡಿ ಪಂದ್ಯಾಟವನ್ನು ಮೊದಲ ಬಾರಿಗೆ ಕೊಡಗು ಜಿಲ್ಲೆಯ ಈ ಕುಶಾಲನಗರದಲ್ಲಿ ನಡೆಸುತ್ತಿದ್ದೇವೆ. ಈ ಕ್ರೀಡಾಕೂಟದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಸಾನಿದ್ಯ ವಹಿಸಲಿದ್ದು, ಉಳಿದಂತೆ ಶ್ರೀ ಶಂಭುನಾಥ ಸ್ವಾಮೀಜಿ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಅರಕಲಗೂಡು ಶಾಸಕರಾದ ಎ.ಮಂಜು, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಬೋಜೇಗೌಡ, ಸೂರಜ್ ರೇವಣ್ಣ, ಮಾಜಿ ಶಾಸಕರಾದ ಅಪ್ಪಚ್ಚುರಂಜನ್, ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮೇ೧೩ ರಂದು ನಡೆಸಲು ಉದ್ದೇಶಿಸಿರುವ ಪ್ರೊ ಕಬಡ್ಡಿ ಕ್ರೀಡಾಕೂಟದ ಅಂಗವಾಗಿ ಸಂಜೆ ೪ ಗಂಟೆಗೆ, ಕುಶಾಲನಗರದ ಬೈಚನ ಹಳ್ಳಿಯ ಮಾರಮ್ಮ ದೇವಸ್ಥಾನದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆವರೆಗೆ ಕಲಾತಂಡಗಳ ಮೂಲಕ ಬೃಹತ್ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಸಮಾಜದ ಮಠಾಧೀಶರು, ಜಿಲ್ಲೆಯ ಜನಾಂಗದ ಜನಪ್ರತಿನಿಧಿಗಳು, ರಾಜ್ಯಮಟ್ಟದ ಹಲವು ತಂಡಗಳು, ಮತ್ತು ರಾಷ್ಟ್ರೀಯ ಮಟ್ಟದ ಖ್ಯಾತ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಸೀನಿಯರ್ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ ಮತ್ತು ಕರ್ನಾಟಕ ರಾಜ್ಯ ಮಟ್ಟದ ಮಹಿಳೆಯರ ಕಬಡ್ಡಿ ಆಹ್ವಾನಿತ ತಂಡಗಳು ಭಾಗವಹಿಸಲಿವೆ. ಪುರುಷರ ವಿಜೇತ ತಂಡಗಳಿಗೆ ಮೊದಲನೆಯ ಬಹುಮಾನ ಒಂದು ಲಕ್ಷ ನಗದು ಮತ್ತು ಆಕರ್ಷಕ ಟ್ರೋಪಿ, ಎರಡನೇ ಬಹುಮಾನ ೫೦,೦೦೦ ಮತ್ತು ಆಕರ್ಷಕ ಟ್ರೋಫಿ, ಮೂರನೇ ಮತ್ತು ನಾಲ್ಕನೇ ಬಹುಮಾನವಾಗಿ ೨೫೦೦೦ ಮತ್ತು ಆಕರ್ಷಕ ಟ್ರೋಪಿ ನೀಡಲಾಗುವುದು ಎಂದ ಅವರು, ಇದೇ ಸಂದರ್ಭದಲ್ಲಿ ತಾಲೂಕು ಒಕ್ಕಲಿಗ ಯುವ ವೇದಿಕೆಯ ಗಣ್ಯರು ಶಾಖೆಯನ್ನು ಉದ್ಘಾಟಿಸಲಿದ್ದಾರೆ ಎಂದು ಕೃಷ್ಣಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ ಹೇರೂರು, ಅವಿನಾಶ್, ಜೈ ರಾಜ್, ಸುನಿಲ್ ಕುಮಾರಪ್ಪ, ಕಿರಣ್ ಹನುಮರಾಜ್ ಇದ್ದರು.