ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಶ್ರೇಷ್ಠ ಕಲೆ ಕಾವಿ...

UDP-Kaavi-1
Published on

ಉದ್ಯಮಿ ಅರವಿಂದ ಹೆಗಡೆ ಅಭಿಮತ

'ಕಾವ್ಯ ರೇಖಾ' ಪ್ರದರ್ಶನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಭಾಗವೇ ಆದ ಕಾವಿ ಕಲೆಯನ್ನು ಉಳಿಸಿ, ಬೆಳೆಸುವಂತಾಗಲು ಇನ್ನಷ್ಟು ಯುವ ಕಲಾವಿದರು ಈ ಕಲೆಯಲ್ಲಿ ತೊಡಗುವಂತಾಗಬೇಕು. ಅಳಿವಿನಂಚಿನಲ್ಲಿದ್ದ ಕರಾವಳಿಯ ಈ ಶ್ರೇಷ್ಠ ಕಲೆಯನ್ನು ಸಂರಕ್ಷಿಸುತ್ತಿರುವ ಹಾಗೂ ಕಲಾಪ್ರದರ್ಶನದ ಮೂಲಕ ಪ್ರಚುರ ಪಡಿಸುತ್ತಿರುವ ಕಲಾವಿದ ಜನಾರ್ದನ್​ ಹಾವಂಜೆ ಅವರ ಶ್ರಮ ಶ್ಲಾಘನೀಯ ಎಂದು ಡನ್​ ಆ್ಯಂಡ್​ ಪಾರ್ಟ್​ನರ್ಸ್​ನ ಸಂಸ್ಥಾಪಕ ಅರವಿಂದ ಹೆಗಡೆ ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು ಜಯನಗರದ ಯುವಕ ಸಂಘದ ಆರ್ಟ್​ ಗ್ಯಾಲರಿಯಲ್ಲಿ ಕಾವಿ ಆರ್ಟ್​ ಫೌಂಡೇಷನ್​ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿಯ ಕಲಾವಿದ ಡಾ.ಜನಾರ್ದನ್​ ರಾವ್​ ಹಾವಂಜೆ ಅವರ ಕಾವ್ಯ ರೇಖಾಕಾವಿ ಕಲೆಯ ಏಕವ್ಯಕ್ತಿ ಕಲಾಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

UDP-Kaavi-2

ಚಿತ್ತಾಕರ್ಷಕ ಕಲೆ ಉಳಿಸೋಣ

ನನ್ನ ಬಾಲ್ಯದ ದಿನಗಳಲ್ಲಿ ಶಿರಸಿಯಲ್ಲಿರುವಾಗ ಪುರಾತನ ಕಟ್ಟಡಗಳಲ್ಲಿ, ದೇಗುಲಗಳಲ್ಲಿ, ವಠಾರಗಳಲ್ಲಿ ಈ ಕಾವಿ ಕಲೆಯನ್ನು ನೋಡುತ್ತಿದ್ದೆ. ಅಂದಿನ ನೆನಪು ಇಂದು ಹಸಿರಾಯಿತು. ಅಂದು ಈ ಕಲೆಯ ಮಹತ್ವ ತಿಳಿದಿರಲಿಲ್ಲ. ಆದರೆ, ವರ್ಣಿಸಲು ಅಸಾಧ್ಯವಾದ ಹಾಗೂ ಚಿತ್ತಾಕರ್ಷಕ ಈ ಕಲೆಯ ಉಳಿವು ಆಗಲೇಬೇಕೆಂದು ಆಶಿಸುತ್ತೇನೆ ಎಂದರು.

ಪ್ರದರ್ಶನದಲ್ಲಿ 60ಕ್ಕೂ ಹೆಚ್ಚು ಕಲಾಕೃತಿ

UDP-Kaavi-3
ಪೌರಾಣಿಕ, ಭಾಗವತ ಕಥಾ ಕಲಾಕೃತಿ, ಮಂಡಲ ವಿನ್ಯಾಸ ಹಾಗೂ ನಿಸರ್ಗ ಜೀವನ ಮೊದಲಾದ 60ಕ್ಕೂ ಹೆಚ್ಚು ಕಾವಿ ಕಲಾಕೃತಿಗಳನ್ನು ವೀಕ್ಷಿಸಿದ ಜನರು ಸಂತಸ ವ್ಯಕ್ತಪಡಿಸಿದರು. ಕಲೆಯ ರಚನೆಯ ಕುರಿತಂತೆ ಕಲಾವಿದ ಡಾ. ಹಾವಂಜೆ ಅವರಲ್ಲಿ ಆಸಕ್ತಿಯಿಂದ ಅನೇಕರು ತಿಳಿದುಕೊಂಡರು. ಡಿ.8ರ ವರೆಗೂ ಪ್ರದರ್ಶನ ನಡೆಯಲಿದೆ.

ಯುವಕ ಸಂಘದ ಯೋಜನಾ ನಿರ್ದೇಶಕ ಮಹೇಶ್​, ಕಾವಿ ಆರ್ಟ್​ ಫೌಂಡೇಷನ್​ನ ನಿರ್ದೇಶಕಿ ಬೇಬಿ ಎಂ. ರಾವ್​ ಉಪಸ್ಥಿತರಿದ್ದರು.

ಬೆಂಗಳೂರು ಕಲಾ ಗ್ಯಾಲರಿಯ ಸಂಯೋಜಕ ಶಿವಪ್ರಸಾದ್​ ಕಾರ್ಯಕ್ರಮ ನಿರೂಪಿಸಿದರು.

ಸುಣ್ಣ ಮತ್ತು ಕೆಮ್ಮಣ್ಣಿನಲ್ಲಿ ಗೀರಿ ನಿರ್ಮಿಸುವ ಈ ಕಾವಿ ಕಲೆ ಕರಾವಳಿ ಭಾಗದ ವಿಶೇಷತೆ. ಇದೊಂದು ದೇಸೀಯ ಕಲೆಯಾಗಿದ್ದು, ಈ ಪ್ರದರ್ಶನದ ಮೂಲಕ ಕರ್ನಾಟಕಕ್ಕೆ ಜಿಯಾಗ್ರಾಫಿಕಲ್​ ಇಂಡಿಕೇಷನ್​ ಟ್ಯಾಗ್​ ಹೊಂದುವ ಪ್ರಯತ್ನ ನಡೆಸಲಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ವರ್ಲ್ಡ್​ ಹೆರಿಟೇಜ್​ ವೀಕ್​ ಸಂದರ್ಭದಲ್ಲಿ ಇಲ್ಲಿ ಪ್ರದರ್ಶನಗೊಳ್ಳುತ್ತಿದೆ. | ಡಾ. ಜನಾರ್ದನ್​ ರಾವ್​ ಹಾವಂಜೆ. ಕಾವಿ ಕಲಾವಿದ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net