

ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಆಶ್ರಯದಲ್ಲಿ ಕಾವ್ಯ ದಶಾವತಾರ-ಕವಿ ಕಾವ್ಯ ಸನ್ಮಾನ ಹಾಗೂ ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಫೆ.26ರಂದು ಉರ್ವಸ್ಟೋರ್‌ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಲಿದೆ.
ಈ ಸಂದರ್ಭ ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರ ಮತ್ತು ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ ಹಾಗೂ ಅಖಿಲ ಭಾರತ ಕವಿಗಳು ಮತ್ತು ಲೇಖಕರ ಒಕ್ಕೂಟ(ಎಐಪಿಎಡಬ್ಲುೃಯು)ದ ಉದ್ಘಾಟನೆ ನೆರವೇರಲಿದೆ. ಕರಾವಳಿ ಕಾಲೇಜು ಸಮೂಹ ಸಂಸ್ಥೆ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ. ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ, ಗೀತೆ ರಚನೆಕಾರ ಶಶಿರಾಜ್ ಕಾವೂರು, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ತಾರಾ ಆಚಾರ್ಯ, ಮಂಗಳೂರು ತಾಲೂಕು ಕಸಾಪ ಅಧ್ಯಕ್ಷ ಮಂಜುನಾಥ್ ರೇವಣ್ಕರ್, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಸಂಚಾಲಕಿ ಲತಾ ಕೃಷ್ಣದಾಸ್ ಭಾಗವಹಿಸಲಿದ್ದಾರೆ. ಈ ಸಂದರ್ಭ ಸತ್ಯವತಿ ಕೊಳಚಪ್ಪು ಅವರ ಕೃತಿಯನ್ನು ಯುಗಪುರುಷದ ಕೆ.ಭುವನಾಭಿರಾಮ ಉಡುಪ ಬಿಡುಗಡೆಗೊಳಿಸಲಿದ್ದಾರೆ.
ಕಾವ್ಯ ದಶಾವತಾರ: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಕಾ.ವೀ ಕೃಷ್ಣದಾಸ್, ಸಂಚಾಲಕಿ ಲತಾ ಕೃಷ್ಣದಾಸ್ ಪರಿಕಲ್ಪನೆ ಹಾಗೂ ಕವಯಿತ್ರಿ ಗೀತಾ ಲಕ್ಷ್ಮೀಶ್ ಸಂಯೋಜನೆಯಲ್ಲಿ 100 ಕವಿಗಳಿಂದ ಕಾವ್ಯ ದಶಾವತಾರ ನಡೆಯಲಿದೆ. ಕನ್ನಡ ಸಾಹಿತ್ಯ ಲೋಕದ ಹೊಸ ಪ್ರಯೋಗದ ವಿಶಿಷ್ಟ ಕವಿ ಸಮ್ಮಿಲನ ‘ಕಾವ್ಯ ದಶಾವತಾರ’ದಲ್ಲಿ ‘ಪ್ರೀತಿ ಪ್ರೇಮ ಸಂಗಮ’, ‘ಜೀವನಾಮೃತ’, ‘ನೋವು ನೋಯಿಸಿತು’, ‘ಮೌಢ್ಯ ಮೋಹ’ ಹಾಗೂ ‘ಆನಂದ ತೊಟ್ಟಿಲು’ ಅವತಾರಗಳ ಅಧ್ಯಕ್ಷತೆಯನ್ನು ಹಿರಿಯ ಕವಿ, ಸಾಹಿತಿ ಡಾ.ವಸಂತಕುಮಾರ ಪೆರ್ಲ ವಹಿಸುವರು. ‘ದ್ವೇಷ ಪಾಶ’, ‘ಜ್ಞಾನ ಸನ್ನಿಧಿ’, ‘ಭಾಗ್ಯ ಬಂದಾಗ’, ‘ಅಮ್ಮ ದೇವರು’ ಮತ್ತು ‘ದೇವರ ತೇರು’ ಅವತಾರಗಳ ಅಧ್ಯಕ್ಷತೆಯನ್ನು ಕವಯಿತ್ರಿ, ರಂಗಕಲಾವಿದೆ ಪೂರ್ಣಿಮಾ ಸುರೇಶ್ ಉಡುಪಿ ವಹಿಸಲಿದ್ದಾರೆ.
ಜೂನಿಯರ್ ರಾಜ್‌ಕುಮಾರ್ ಜಗದೀಶ್ ಶಿವಪುರ ಅವರಿಂದ ದಶಾವತಾರ ಗೀತೆಗಳು, ಕೆ.ಎಲ್ ಪೋಟ್ರೇಟ್ಸ್‌ನ ಲಕ್ಷ್ಮೀನಾರಾಯಣ ಅವರಿಂದ ವೈವಿಧ್ಯಮಯ ಕಲಾವಿನೋದನ ನಡೆಯಲಿದೆ. ಸಮಾರಂಭದಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಕವಿಗಳಿಗೆ ಚಿನ್ನದ ನಾಣ್ಯ, ಬೆಳ್ಳಿ ನಾಣ್ಯ ಸಹಿತ 20ಕ್ಕೂ ಅಧಿಕ ಬಹುಮಾನ ಗೆಲ್ಲುವ ಅವಕಾಶವಿದೆ.
ಸಾಧನಾ ಪ್ರಶಸ್ತಿ ಪುರಸ್ಕೃತರು: ಡಾ.ಹೇಮಾವತಿ ವೀ.ಹೆಗ್ಗಡೆ(ಧಾರ್ಮಿಕ ಮತ್ತು ಮಹಿಳಾ ಸಬಲೀಕರಣ), ಎಸ್.ದೊಡ್ಡಣ್ಣ(ಚಲನಚಿತ್ರ), ಎಂ.ಜಿ.ಅರಸ್(ಸಾಹಿತ್ಯ ಮತ್ತು ಪ್ರಕಾಶನ), ಎಂ.ಎಸ್.ಮಹಾಬಲೇಶ್ವರ ಭಟ್(ಬ್ಯಾಂಕಿಂಗ್), ಸೀತಾರಾಮ್ ಕಟೀಲು(ಯಕ್ಷಗಾನ), ಸಚ್ಚಿದಾನಂದ ಉಡುಪ(ಪತ್ರಿಕೋದ್ಯಮ), ನವನೀತ್ ಶೆಟ್ಟಿ ಕದ್ರಿ(ಮಾಧ್ಯಮ ಮತ್ತು ಯಕ್ಷಗಾನ), ಪಿ.ಬಿ.ಹರೀಶ್ ರೈ(ಪತ್ರಿಕೋದ್ಯಮ), ಅರೆಹೊಳೆ ಸದಾಶಿವ ರಾವ್(ಸಂಘಟನೆ ಮತ್ತು ಕಲಾಸೇವೆ) ಆಯ್ಕೆಯಾಗಿದ್ದಾರೆ.
ಸಾಧನಾ ಯುವ ರಾಜ್ಯ ಪ್ರಶಸ್ತಿ: ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ವಿಭಾ ಶ್ರೀನಿವಾಸ್ ನಾಯಕ್, ಸಾಧನಾ ವಿಶೇಷ ಪುರಸ್ಕಾರವನ್ನು ಕ್ರೀಡಾ ವರದಿಗಾರ ಜಗದೀಶ್‌ಚಂದ್ರ ಅಂಚನ್ ಸೂಟರ್‌ಪೇಟೆ, ಸಾಧನಾ ರಾಜ್ಯ ಬಾಲ ಪುರಸ್ಕಾರವನ್ನು ಬಹುಮುಖ ಪ್ರತಿಭೆ ಲಾಲಿತ್ಯಾ ಬೇಲೂರು ಅವರಿಗೆ ಪ್ರದಾನಿಸಲಾಗುತ್ತದೆ.
ಸಂಘ, ಸಂಸ್ಥೆಗಳು: ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿ, ತುಳು ಭಾಷಾ ಹೋರಾಟಕ್ಕಾಗಿ ಜೈ ತುಲುನಾಡ್ ಸಂಸ್ಥೆ ಸಾಧನಾ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಸಹಾಯಕ ನಿರ್ದೇಶಕ ರಾಜೇಶ್ ಕೆ., ಸಂಘಟಕ ಗುರುಪ್ರಸಾದ್ ಕಡಂಬಾರ್ ಕೊಂಚಾಡಿ, ಸಿಎ ಎಸ್.ಎಸ್ ನಾಯಕ್, ಕಲ್ಕೂರ ಪ್ರತಿಷ್ಠಾನ ಮುಖ್ಯಸ್ಥ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಥಾಯಜ್ಞ, ಹಂಸಕಾವ್ಯ ಪುರಸ್ಕಾರ: ಎ.ಎನ್ ಪ್ರಸನ್ನ ಅವರ ‘ಬಿಡುಗಡೆ’ ಕಥಾ ಸಂಕಲನ ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, 25 ಸಾವಿರ ರೂ. ಹಾಗೂ ಪ್ರಶಸ್ತಿ ಪ್ರದಾನಿಸಲಾಗುತ್ತದೆ. ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರಕ್ಕೆ ರಘು ಇಡ್ಕಿದು ಅವರ 'ನೆತ್ತರು ಮತ್ತು ಮೌನದೊಳಗೊಂದು ಚಿತ್ರ’ ಆಯ್ಕೆಯಾಗಿದ್ದು, 10 ಸಾವಿರ ರೂ. ಹಾಗೂ ಚಿನ್ನದ ಪದಕ ಪ್ರದಾನಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲಾಲಿತ್ಯಾ ಬೇಲೂರು ಅವರಿಂದ ‘ನಾಟ್ಯ ಮಯೂರಿ’ ಭರತನಾಟ್ಯ, ರಿಶಿಕಾ ಕುಂದೇಶ್ವರ್ ಅವರಿಂದ ‘ಹಾಡು ಹಕ್ಕಿ’ ಗಾನ ರಂಜನೆ ನಡೆಯಲಿದೆ.