

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕದ ಕರಾವಳಿ ಭಾಗದ ಅನೂಹ್ಯವಾದ ಕಾವಿ ಕಲೆಯನ್ನು ಕನ್ನಡಿಗರಾದ ನಾವೆಲ್ಲ ಉಳಿಸಿ ಬೆಳೆಸಬೇಕಾದುದು ಕರ್ತವ್ಯ. ಈ ಕಲೆಗೆ ಆದಷ್ಟು ಶೀಘ್ರದಲ್ಲಿ ಕರ್ನಾಟಕಕ್ಕೆ ಜಿಐ ಟ್ಯಾಗ್ ಲಭಿಸಲಿ. ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ಈ ಕಲೆಯ ಬೆಳೆಸುವಿಕೆಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ್ ಭರವಸೆ ನೀಡಿದರು.
ಬೆಂಗಳೂರಿನ ಚಿಕತ್ರಕಲಾ ಪರಿಷತ್ನ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾವಂಜೆ ಸಂಯೋಜನೆಯಲ್ಲಿ ಉಡುಪಿಯ ಕಲಾವಿದ ಜನಾರ್ದನ ರಾವ್ ಹಾವಂಜೆ ಅವರ ಕಾವಿ ಕೆಲಿಡೋಸ್ಕೋಪ್ ಎಂಬ ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ದೇಸೀಯ ಪಾರಂಪರಿಕ ಕಾವಿ ಕಲೆಯ ಹೂರಣವನ್ನು ಡಾ. ಹಾವಂಜೆ ಅವರು ಈ ಸುಂದರ ಪ್ರದರ್ಶನದ ಮೂಲಕ ಕಲಾ ರಸಿಕರಿಗೆ ಉಣಬಡಿಸಿದ್ದಾರೆ. ಕಾವಿ ಕಲೆ ಎಷ್ಟು ಶ್ರೀಮಂತವಾಗಿದೆ ಎನ್ನುವುದು ಇಲ್ಲಿನ ವಿವಿಧ ಚಿತ್ರಗಳೇ ಸಾರುತ್ತಿವೆ. ನಶಿಸಿಹೋಗುತ್ತಿದ್ದ ಈ ಅದ್ಭುತ ದೇಸೀ ಕಲೆಯನ್ನು ಸಂರಕ್ಷಿಸಿದ ಡಾ. ಹಾವಂಜೆ ಅವರ ಕಾರ್ಯ ನಿಜಕ್ಕೂ ಶ್ಲಾನೀಯ ಎಂದು ಪ.ಸ. ಕುಮಾರ್ ಸಂತಸ ವ್ಯಕ್ತಪಡಿಸಿದರು.
ಲಹರಿ ಗ್ರೂಪ್ನ ರೂಪಾ ಹರಿಪ್ರಸಾದ್, ಬೆಂಗಳೂರಿನ ಹಲವು ಹಿರಿಯ ಕಲಾವಿದರು, ಶಿಲ್ಪಶಾಸ್ತ್ರಜ್ಞರು ಉಪಸ್ಥಿತರಿದ್ದರು.
ಕಲಾವಿದ ಡಾ. ಜನಾರ್ದನ ಹಾವಂಜೆ, ಕಟ್ಟಡಗಳ ಗೋಡೆಗಳಿಗೆ ಕೆಮ್ಮಣ್ಣಿನ ಲೇಪನ ಮಾಡಿ ಗೀರಿ ರಚಿಸಲಾಗುವ ಹಾಗೂ ಅಳಿವಿನಂಚಿನಲ್ಲಿರುವ ಪುರಾತನ ಕಾವಿ ಕಲೆಯ ಕುರಿತು ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಹಾಗೂ ಜನಪದೀಯ ಲಕ್ಷಣದ ಕಾವಿ ಕಲಾಪ್ರದರ್ಶನವು ನ.17ರ ವರೆಗೂ ಚಿತ್ರಕಲಾ ಪರಿಷತ್ನ ಗ್ಯಾಲರಿಯಲ್ಲಿ ಕಲಾ ಸಹೃದಯರಿಗೆ ತೆರೆದಿರಲಿದೆ ಎಂದು ತಿಳಿಸಿದರು.
ಅಧ್ಯಯನಶೀಲ, ಸಮಕಾಲೀನ ಕಲಾವಿದನೋರ್ವನ ಕೈಯಲ್ಲಿ ಪ್ರಾಂತೀಯ ಕಲೆಯೊಂದು ದೊರೆತಾಗ ಅದು ಹೊರ ಹೊಮ್ಮಿಸುವ ರೂಪಗಳಿಗೆ ಈ ಕಲಾಪ್ರದರ್ಶನವೇ ಸಾಕ್ಷಿ. ಗೀರು ಕಲೆಯಾದ ಕಾವಿ ಕಲೆಯಲ್ಲಿ ದೇಶದ ಪಾರಂಪರಿಕ ಸಂಸತಿಯ ಕಥಾನಕವೇ ಮೇಳೈಸಿದೆ. | ಗುರುದಾಸ್ ಶೆಣೈ. ಹಿರಿಯ ಕಲಾವಿದ, ಬೆಂಗಳೂರು