ಶ್ರೀ ಬಂಡೆ ಮಹಾಕಾಳಿ ಅಮ್ಮ ದೇಗುಲದಲ್ಲಿ ನವರಾತ್ರಿ ಸಂಭ್ರಮ

Devalaya Dharshana
Published on

ಬೆಂಗಳೂರು: ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಾಲಯದಲ್ಲಿ ಈಗ ನವರಾತ್ರಿಯ ಸಂಭ್ರಮ. ಇದರ ಅಂಗವಾಗಿ ಅ. 24ರವರೆಗೆ ‘ಕಾಳಿ ಉತ್ಸವ’ ಆಯೋಜಿಸಲಾಗಿದೆ. ಒಂಬತ್ತು ದಿನಗಳ ಈ ಉತ್ಸವದಲ್ಲಿ ಅಮ್ಮನವರಿಗೆ ನಿತ್ಯವೂ ಅಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಗುವುದು. ನಿತ್ಯ ಹೋಮ ಹಾಗೂ ಲಲಿತ ಸಹಸ್ರನಾಮ ಪಾರಾಯಣ ಹಾಗೂ ಪ್ರವಚನಗಳು ನಡೆಯಲಿದೆ. ಭಕ್ತರ ಕ್ಷೇಮ, ಆಯುರಾರೋಗ್ಯ, ಭಾಗ್ಯಾಭಿವೃದ್ಧಿಗಾಗಿ ಪ್ರಾರ್ಥಿಸುವ ಮೂಲಕ ನಿತ್ಯ ಪೂಜಾ ಕೈಂಕರ್ಯಗಳು ನಡೆಯಲಿವೆ.


ಉತ್ಸವದಲ್ಲಿ ಕಳಸ ಸ್ಥಾಪನೆ, ಪ್ರಾಣ ಪ್ರತಿಷ್ಠೆ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ನವ ದುರ್ಗಾ ಹೋಮ, ಸುದರ್ಶನ ಹೋಮ, ಮಹಾಲಕ್ಷ್ಮೀ ಹೋಮ, ಮಹಾಸರಸ್ವತಿ ಹೋಮ, ಮನ್ಯೂಸೂಕ್ತ ಹೋಮ, ಚಂಡಿ ಹೋಮ, ಗಾಯತ್ರಿ ಹೋಮ, ಕುಂಭಾಭಿಷೇಕ, ನವವರ್ಣ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳ ಜೊತೆಗೆ ಭಜನೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ವಿಶೇಷ ಅಲಂಕಾರಗಳು:
ಪ್ರತಿ ದಿನ ಒಂದೊಂದು ರೀತಿಯ ಬಂಡೆ ಮಹಾಕಾಳಿ ಅಲಂಕಾರ, ಬೆಣ್ಣೆ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಅರಿಶಿನ-ಕುಂಕುಮ ಅಲಂಕಾರ, ಮಹಾಲಕ್ಷ್ಮೀ ಅಲಂಕಾರ, ಸರಸ್ವತಿ ಅಲಂಕಾರ, ಕಾಮಾಕ್ಷಿ ಅಲಂಕಾರ, ಚಾಮುಂಡೇಶ್ವರಿ ಅಲಂಕಾರ, ಮೀನಾಕ್ಷಿ ಅಲಂಕಾರ, ವಜ್ರಾಭರಣ ಅಲಂಕಾರ ಮಾಡಲಾಗುವುದು. ಅ. 24ರ ವಿಜಯದಶಮಿಯಂದು ವಜ್ರಾಭರಣ ಅಲಂಕಾರದಲ್ಲಿ ಕಂಗೊಳಿಸುವ ಅಮ್ಮನವರ ಅದ್ದೂರಿ ಪಲ್ಲಕ್ಕಿ ಉತ್ಸವ ಜರುಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಅ. 18ರಂದು ಸಂಜೆ ಹಾಸ್ಯ ಕಲಾವಿದರಿಂದ ‘ಹಾಸ್ಯ ಸಂಜೆ’ ಏರ್ಪಡಿಸಲಾಗಿದೆ. ಅ. 19ರಂದು ಕುಂದಾಪುರದ ವಿಶ್ವನಾಥ ಶೆಟ್ಟಿ ಅವರ ಕರ್ನಾಟಕ ಕಲಾದರ್ಶಿನಿ ತಂಡದಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಅ. 20ರಂದು ಕಲಾವಿದ ಡಾ. ಸಂಜಯ್ ಶಾಂತಾರಾಮ್ ತಂಡಿದಂದ ‘ದೇವಿ ವೈಭವ’ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಅ. 21ರಂದು ನಾಗೇಶ್ ಮತ್ತು ತಂಡದವರು ನಾಟ್ಯಾಂಕುರ ಕಲಾ ಪ್ರದರ್ಶನ ನೀಡಲಿದ್ದಾರೆ. ಅ. 22ರಂದು ನಟರಾಜ್ ಎಂಟರರ್ಟೈನರ್ಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಅ. 23ರಂದು ವಿದುಷಿ ಭವ್ಯಶ್ರೀ ಅವರ ಕೃಷ್ಣಗಂಗ ತಂಡದಿಂದ ನೃತ್ಯ ರೂಪಕ ನಡೆಯಲಿದೆ.

ದೇವಾಲಯದ ಐತಿಹ್ಯ
ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಾಲಯ ನಗರದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ವಿಶಾಲವಾದ ಪ್ರಾಂಗಣ, ಗರ್ಭಗುಡಿ, ಪ್ರದಕ್ಷಿಣಾ ಪಥ ಹೊಂದಿದ್ದು, ಈ ದೇವಾಲಯದಲ್ಲಿ ಬಂಡೆಯಲ್ಲಿ ಮೂಡಿರುವ ಮೂರು ಅಡಿ ಎತ್ತರವಿರುವ ದೇವಿಯು ಶ್ರೀ ಬಂಡೆ ಮಹಾಕಾಳಿ ಹೆಸರಿನಲ್ಲಿ ಆರಾಧಿಸಲ್ಪಡುತ್ತಿದ್ದಾಳೆ. ನಿಂತ ಭಂಗಿಯಲ್ಲಿ ದರ್ಶನ ನೀಡುತ್ತಿರುವ ಅಮ್ಮನವರು ಚತುರ್ಭುಜಳಾಗಿದ್ದು, ಕೈಗಳಲ್ಲಿ ಅಭಯ, ಪರಶು, ಡಮರು ಹಾಗೂ ವರದ ಮುದ್ರೆ ಹಿಡಿದು ಪ್ರಸನ್ನ ವದನಳಾಗಿ ಭಕ್ತರನ್ನು ಪೊರೆಯುತ್ತಿದ್ದಾಳೆ. ಹಿಂದೆ ಅಮ್ಮನ ದರ್ಶನಕ್ಕಾಗಿ ಭಕ್ತರು ಎತ್ತಿನ ಬಂಡಿಯಲ್ಲಿ ಬರುತ್ತಿದ್ದರು. ಅದೇ ದಿನ ಮರಳಲು ಸಾಧ್ಯವಾಗದವರು ದೇವಾಲಯದ ಸುತ್ತಲು ಬಂಡಿಗಳನ್ನು ನಿಲ್ಲಿಸುತ್ತಿದ್ದರು. ಹಾಗಾಗಿ ‘ಬಂಡಿ ಕಾಳಾಮ್ಮ’ ಎಂಬ ಹೆಸರಿನಿಂದಲೂ ಅಮ್ಮನನ್ನು ಕರೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net