ಕಾಡು ರಕ್ಷಿಸದಿದ್ದರೆ ನಾಡಿಗೆ ಕೇಡು: ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಎಚ್ಚರಿಕೆ

14-cpt-3p
Published on

ಚನ್ನಪಟ್ಟಣ: ಕಾಡಿನಿಂದ ನಾಡು. ಕಾಡು ನಾಶವಾದರೆ ಜೀವಸಂಕುಲಕ್ಕೆ, ನಾಡಿಗೆ ಕೇಡು. ಈ ಬಗ್ಗೆ ಈಗಲೇ ಎಚ್ಚೆತ್ತುಕೊಂಡು ಪರಿಸರ ರಕ್ಷಿಸಬೇಕಿದೆ, ಮುಂದಾಗುವ ಅನಾಹುತ ತಡೆಗಟ್ಟಬೇಕಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ಅನಿತಾ ಎಸ್.ಅರೇಕಲ್ ಕರೆ ನೀಡಿದರು.

ತಾಲೂಕಿನ ಕುವೆಂಪು ಕಾಲೇಜು ಹಿಂಭಾಗದ ಚಿಕ್ಕಮಣ್ಣು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಪರಿಸರ ಸಂರಕ್ಷಣಾ ಒಕ್ಕೂಟ ಆಯೋಜಿಸಿದ್ದ 'ಬುಟ್ಟಿಯಿಂದ ಬೆಟ್ಟಕ್ಕೆ' ಅಭಿಯಾನದಲ್ಲಿ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಅರಣ್ಯ ನಾಶವಾಗುತ್ತಿದೆ, ನೀರು, ಗಾಳಿ ಕಲುಷಿತವಾಗುತ್ತಿದೆ. ಹೀಗಾಗಿ ಗಿಡ, ಮರಗಳನ್ನು ಬೆಳೆಸಬೇಕು, ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು.

ಈ ಮೂಲಕ ಪರಿಸರ ಕಾಪಾಡಲು ಸಾಧ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ನಾಮಲಕ ಉದ್ಘಾಟನೆ: ಪರಿಸರ ಪರಿಚಾರಕ ಮುಕುಂದರಾವ್ ಲೋಕಂಡೆ ಮಾತನಾಡಿ, ಕಳೆದ 14 ವರ್ಷಗಳ ಹಿಂದೆ ತಾಲೂಕಿನ ಹಲವು ಸಮಾನಮನಸ್ಕ ಗೆಳೆಯರ ಜತೆಗೂಡಿ, ಚಿಕ್ಕಮಣ್ಣುಗುಡ್ಡೆ ಅರಣ್ಯಪ್ರದೇಶದಲ್ಲಿ ಶಾಲಾಮಕ್ಕಳಿಂದ ಸಂಸ್ಕರಿಸಿದ ವಿವಿಧ ಬಗೆಯ ಬೀಜಗಳನ್ನು ಸಾವಿರಾರು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಬುಟ್ಟಿಯಿಂದ ಬೆಟ್ಟಕ್ಕೆ ಎಂಬ ಕಲ್ಪನೆ ಜತೆಗೆ ಬಿತ್ತಲಾಗಿತ್ತು. ಆ ಬೀಜಗಳು ಒಡೆದು ಇಂದು ಹೆಮ್ಮರವಾಗಿ ಶುದ್ಧ ಗಾಳಿ ನೀಡುತ್ತಿವೆ. ಮುಂದಿನ ಪೀಳಿಗೆಗೆ ಪರಿಸರ ಪ್ರಜ್ಞೆ ಬೆಳೆಸಲು ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಈ ಸಾಹಸದ ಯಶೋಗಾಥೆಯ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವೇದಿಕೆಯಲ್ಲಿ ವಿಭಾಗೀಯ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಿನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಾಗರಾಜು, ಎಂ.ರಾಮಕೃಷ್ಣಪ್ಪ, ಇಲಾಖೆ ಹಿರಿಯ ಸಮಾಲೋಚಕಿ ಚಂದ್ರಪ್ರಭಾ, ಜಲಾಮೃತ ಯೋಜನೆಯ ನಿರ್ದೇಶಕ ನರಸಿಂಹಯ್ಯ, ಕುವೆಂಪು ಕಾಲೇಜು ಪ್ರಾಂಶುಪಾಲ ಶಿವಲಿಂಗಯ್ಯ, ಅರಣ್ಯಾಧಿಕಾರಿ ಮಹಮದ್ ಮನ್ಸೂರ್, ಪ್ರಾಂಶುಪಾಲ ಕೊತ್ತಿಪುರ ಜಿ. ಶಿವಣ್ಣ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್, ಗ್ರಾಮಾಂತರ ಪಿಎಸ್‌ಐ ಶಿವಕುಮಾರ್ ಸೇರಿ ಇತರರು ಉಪಸ್ಥಿತರಿದ್ದರು.

ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳಲು ಮುಂದಾಗಬಾರದು. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವೇ ಅರಣ್ಯನಾಶಕ್ಕೆ ಕಾರಣ. ಅರಣ್ಯದಲ್ಲಿ ಆಹಾರ, ನೀರಿನ ಕೊರತೆಯಾಗಿ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. -ಎಸ್.ಎನ್.ಹೆಗಡೆ, ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net