

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ ತಿಂಗಳ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಆಚರಿಸಲು ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಸೇರಿದಂತೆ ವಿವಿಧ ಜನರು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಲಹೆಗಳನ್ನು ನೀಡಿದರು. ‘ಸಭೆಯಲ್ಲಿ ವ್ಯಕ್ತವಾಗುವ ಸೂಕ್ತ ಸಲಹೆಗಳನ್ನು ಪರಿಗಣಿಸಿ ಸದ್ಯದಲ್ಲಿಯೇ ಸಮ್ಮೇಳನದ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು’ ಎಂದು ಕಸಾಪ ನಗರಾಧ್ಯಕ್ಷ ಕೆ.ಎಸ್. ಶಿವರಾಮು ಹೇಳಿದರು.
ಕಲಾಮಂದಿರದಲ್ಲಿ ಸಮ್ಮೇಳನವನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ. ಸಮ್ಮೇಳನಕ್ಕೆ ಚಾಮರಾಜ ಕ್ಷೇತ್ರದ ಸಾಹಿತಿಯೊಬ್ಬರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮ್ಮೇಳನಾಧ್ಯಕ್ಷರ ಆಕರ್ಷಕ ಮೆರವಣಿಗೆಯನ್ನು ನಡೆಸಲಾಗುವುದು ಎಂದು ಕೆ.ಎಸ್. ಶಿವರಾಮು ತಿಳಿಸಿದರು. ಬಹುತೇಕ ಜನರು ಕಲಾಮಂದಿರದಲ್ಲಿ ಸಮ್ಮೇಳನ ನಡೆಸುವುದಕ್ಕೆ ಸಹಮತ ವ್ಯಕ್ತಪಡಿಸಿದರು. ಕೆಲವರು ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು ಭಾಗದಲ್ಲಿ ಸಮ್ಮೇಳನ ಆಯೋಜಿಸಲು ಸಲಹೆ ನೀಡಿದರು.
ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡಬೇಕು. ಆ ಮೂಲಕ ಮಕ್ಕಳಲ್ಲಿ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು. ಸಮ್ಮೇಳನದಲ್ಲಿ ಪುಸ್ತಕ ಮೇಳ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂಬ ಸಲಹೆ ವ್ಯಕ್ತವಾಯಿತು.
ಸಭೆಯಲ್ಲಿ ಸಾಹಿತಿ ಸಿ.ಪಿ. ಕೃಷ್ಣಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಜಿಲ್ಲಾಧ್ಯಕ್ಷರಾದ ಎಂ. ಚಂದ್ರಶೇಖರ್, ವೈ.ಡಿ. ರಾಜಣ್ಣ, ನಗರ ಪಾಲಿಕೆ ಮಾಜಿ ಸದಸ್ಯರಾದ ಎಸ್.ಬಿ.ಎಂ. ಮಂಜು, ಸುಬ್ಬಯ್ಯ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಸಾಹಿತಿಗಳಾದ ಪುಷ್ಪಾ ಅಯ್ಯಂಗಾರ್, ಲತಾ ಸುದರ್ಶನ್ ಹಾಗೂ ಇತರರು ಇದ್ದರು.