

ಹೊಳೆನರಸೀಪುರ: ಹಿರಿಯರ ವಿಭಾಗದ ಅಂತಾರಾಷ್ಟ್ರೀಯ ಕ್ರೀಡಾಪಟು, ಅಂಗನವಾಡಿ ಶಿಕ್ಷಕಿ ಕೆ.ವಿಜಯಕುಮಾರಿ ಅವರು ಕೈಗೊಂಡಿರುವ ಅಯೋಧ್ಯೆ, ನವದೆಹಲಿ ಭೇಟಿಯ 3051 ಕಿಲೋಮೀಟರ್ ಸಂಕಲ್ಪ ಯಾತ್ರೆಗೆ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಚಾಲನೆ ನೀಡಿದರು.
ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಬುಧವಾರ ಪೂಜೆ ಸಲ್ಲಿಸಿದ ಬಳಿಕ ತಾಲೂಕು ಕಚೇರಿಗೆ ಭೇಟಿ ನೀಡಿದ ಕೆ.ವಿಜಯಕುಮಾರಿ ಅವರು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರಿಂದ ಅನುಮತಿ ಪತ್ರ ಪಡೆದು ದ್ವಿಚಕ್ರವಾಹನದಲ್ಲಿ ಯಾತ್ರೆಯನ್ನು ಆರಂಭಿಸಿದರು.
15 ದಿನಗಳ ಈ ಯಾತ್ರೆಯಲ್ಲಿ ಪ್ರತಿನಿತ್ಯವೂ 200 ರಿಂದ 250 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದು ಅಯೋಧ್ಯೆ ಶ್ರೀ ರಾಮನ ದರ್ಶನ ಮಾಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮತ್ತು ನವದೆಹಲಿ ಸಂಸತ್ ಭವನಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದೇನೆ. ಪಟ್ಟಣದ ಹಲವರು ಆರ್ಥಿಕ ನೆರವು ನೀಡಿ ಯಾತ್ರೆಗೆ ಸಹಕರಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಕೆ.ವಿಜಯಕುಮಾರಿ ತಿಳಿಸಿದರು.
ಸಾಹಿತಿ ನಾಗೇಶ್ ಕೌಂಡಿನ್ಯ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಾಲೂಕು ಅಧ್ಯಕ್ಷ ಪಿ. ಶಂಕರ ನಾರಾಯಣ ಐತಾಳ್, ಕಾರ್ಯದರ್ಶಿ ಕುಮುದಾ ರಂಗನಾಥ್ ಇತರರು ಕೆ.ವಿಜಯಕುಮಾರಿ ಅವರನ್ನು ಬೀಳ್ಕೊಟ್ಟರು.