

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ 25.50 ಲಕ್ಷ ರೂ. ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಬೆಂಗಳೂರು ನಗರಸಭಾ ವಲಯ ಸಹಾಯಕ ಆಯುಕ್ತ ಕೆ.ವಿ. ವೆಂಕಟರಮಣ್ ಗುರುಪ್ರಸಾದ್ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ತಹಸೀಲ್ದರ್ ಎಸ್.ಆರ್. ಅರವಿಂದಬಾಬು, ಈ ಕುರಿತು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ಆರೋಪಿತ ವೆಂಕಟರಮಣ ಗುರುಪ್ರಸಾದ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಜಿ. ರಸ್ತೆಯ ಕರ್ನಾಟಕ ಬ್ಯಾಂಕ್‌ನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಉಳಿತಾಯ ಖಾತೆ ಇದೆ. 2020ರ ಜುಲೈಯಿಂದ ವೆಂಕಟರಮಣ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಮುಜರಾಯಿ ದೇವಸ್ಥಾನಗಳ ಆಡಳಿತ ಸಹಾಯಕ ಆಯುಕ್ತರ ಅಧೀನದಲ್ಲಿವೆ. ಬ್ಯಾಂಕ್ ಖಾತೆಯಲ್ಲಿ ಇದ್ದ 25.50 ಲಕ್ಷ ರೂ.ವನ್ನು ವಿವಿಧ ದಿನಾಂಕದಂದು ಚೆಕ್ ಮತ್ತು ನಗದು ಡ್ರಾ ಮಾಡಿ ಪರಿಚಿತ ವ್ಯಕ್ತಿಗಳಿಗೆ ಆರೋಪಿ ವರ್ಗಾವಣೆ ಮಾಡಿದ್ದರು. ವಿಷಯ ತಿಳಿದು ವೆಂಕಟರಮಣ್‌ಗೆ ನೋಟಿಸ್ ಕೊಟ್ಟು ಆರೋಪ ಸಂಬಂಧ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು.
ಅದಕ್ಕೆ ಪ್ರತಿಯಾಗಿ ವೆಂಕಟರಮಣ್, 2021ರ ಏ.19 ರಿಂದ 29ರವರೆಗೆ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗ ಶಕ್ತ್ಯೋತ್ಸವ ಕಾರ್ಯಕ್ರಮಕ್ಕೆ 15.97 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಉತ್ತರಿಸಿದ್ದರು. ಉಳಿಕೆ 9.53 ಲಕ್ಷ ರೂ. ಬಗ್ಗೆ ಮಾಹಿತಿ ನೀಡಿಲ್ಲ.
ಅಲ್ಲದೆ, ಕಚೇರಿ ನಿರ್ವಾಹಕ ಎಸ್. ಭವ್ಯಾ ಕಡೆಯಿಂದ 10 ಗ್ರಾಂ ಚಿನ್ನದ ನಾಣ್ಯ ಮತ್ತು ಮುರಿದ ಚಿನ್ನದ ತುಂಡನ್ನು ಪಡೆದಿದ್ದಾರೆ. ಇದರ ಬಗ್ಗೆಯೂ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ವೆಂಕಟರಮಣ ಗುರುಪ್ರಸಾದ್ ವಿರುದ್ಧ ತನಿಖೆ ಕೈಗೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಅರವಿಂದಬಾಬು ಉಲ್ಲೇಖಿಸಿದ್ದರು. ಈ ಅನ್ವಯ ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.