ವಿಜ್ಞಾನ ಸಂಶೋಧನೆಯಲ್ಲಿ ತೊಡಗಲು ಕೆ.ಟಿ.ಬೇಬಿಮ್ಯಾಥ್ಯೂ ಕರೆ

MDK05
Published on

ಮಡಿಕೇರಿ: ವಿದ್ಯಾರ್ಥಿಗಳು ವಿಜ್ಞಾನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಕೈಗೊಂಡು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಹೇಳಿದರು.


ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕ.ರಾ.ವಿ.ಪ.) ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ.ರಾ.ವಿ.ಪ. ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.


ರಾಜ್ಯ ವಿಜ್ಞಾನ ಪರಿಷತ್ತಿನ ವಿದ್ಯಾರ್ಥಿಗಳಿಗೆ ವಿಜ್ಞಾನ ದಲ್ಲಿ ವೆವಿಧ್ಯಮಯ ಚಟುವಟಿಕೆಗಳನ್ನು ಸಂಘಟಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಸೂಕ್ತ ಅವಕಾಶ ಬಳಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಕೈಗೊಳ್ಳಬೇಕು ಎಂದರು.


ಜಿಲ್ಲೆಯಲ್ಲಿ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಕಾರ್ಯಕ್ರಮಗಳ ಸಂಘಟಕ ಟಿ.ಜಿ.ಪ್ರೇಮಕುಮಾರ್ ಮತ್ತು ವಿಜ್ಞಾನ ಶಿಕ್ಷಕರ ತಂಡವು ಜಿಲ್ಲೆಯಲ್ಲಿ ವಿವಿಧ ವೈಜ್ಞಾನಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೇರೇಪಣೆ ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು.


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೆತ್ರದಲ್ಲಿ ಹೆಚ್ಚು ಅಧ್ಯಯನ ಕೆಗೊಂಡು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ವಿಜ್ಞಾನ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ವಿಜ್ಞಾನದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಕೊಡಗಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.


ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಕೆ.ಜಿ.ನೀಲಕಂಠಪ್ಪ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಡಿ.ಕೃಷ್ಣಚೈತನ್ಯ, ಬಿ.ಆರ್.ಸಿ ಪಿ.ಕೆ.ನಳಿನಿ, ಕ್ವಿಜ್ ಮಾಸ್ಟರ್ ಸಿ.ಎಸ್.ಸುರೇಶ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಿ.ಎಂ.ರೇವತಿ, ಸಮಿತಿಯ ಕೋಶಾಧಿಕಾರಿ ಜಿ.ಶ್ರೀಹರ್ಷ, ವಿಜ್ಞಾನ ಶಿಕ್ಷಕ ಹ್ಯೂಬರ್ಟ್ ಡಯಾಸ್, ಬಿ.ಬಿ.ದಿನೇಶ್, ಚಂದ್ರಕಲಾ ಇದ್ದರು.

ಕೂಡಿಗೆ ಸೈನಿಕ ಶಾಲೆಯ ಲಕ್ಷಕುಮಾರ್, ಜನಿತ್ ತಿವಾರಿ ಆಯ್ಕೆ
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು(ಕ.ರಾ.ವಿ.ಪ.) ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಬೆಳಗಾವಿ ನಗರದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸರ್ ಸಿ.ವಿ.ರಾಮನ್ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಕೊಡಗು ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿಗಳಾದ ಲಕ್ಷಕುಮಾರ್ ಸಿಂಗ್ ಹಾಗೂ ಜನಿತ್ ತಿವಾರಿ ಆಯ್ಕೆಯಾಗಿದ್ದಾರೆ.


ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆ ಸೈನಿಕ ಶಾಲೆಯ ಮಾರ್ಗದರ್ಶಿ ಶಿಕ್ಷಕ ದಾದಾ ಡಿ ಕುಶ್ನಾಳೆ ನೇತೃತ್ವದ ತಂಡ ಮೌಖಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಗೊಂಡಿದೆ. ಗೋಣಿಕೊಪ್ಪ ಬಳಿಯ ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಪುಲ್ ಪೊನ್ನಪ್ಪ ಮತ್ತು ವೇದಾಂತ್ ಬೆಳ್ಯಪ್ಪ ತಂಡದ ಮಾರ್ಗದರ್ಶಿ ಶಿಕ್ಷಕಿ ಅನಿತಾ ಉಪ್ಪಿನ್ ನೇತೃತ್ವದಲ್ಲಿ ದ್ವಿತೀಯ ಸ್ಥಾನ ಪಡೆಯಿತು.


ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ಎಂ.ಎನ್.ಚಂದನ್ ಮತ್ತು ಸೊಮಾನ್ಸ್ ವೈ. ನೀಲ್ ತಂಡವು ಮಾರ್ಗದರ್ಶಿ ಶಿಕ್ಷಕ ಹ್ಯೂಬರ್ಟ್ ಡಯಾಸ್ ನೇತೃತ್ವದಲ್ಲಿ ತೃತೀಯ ಸ್ಥಾನ ಪಡೆದರೆ, ಗೋಣಿಕೊಪ್ಪ ಕಾಲ್ಸ್ ಶಾಲೆಯ ಶಾಶ್ವತ್ ಕುಶಾಲಪ್ಪ ಮತ್ತು ಸಿ.ಕೆ.ಉತ್ತಪ್ಪ ತಂಡದ ಮಾರ್ಗದರ್ಶಿ ಶಿಕ್ಷಕ ಎಂ.ಜೆ.ಬಿಜು ನೇತೃತ್ವದಲ್ಲಿ ನಾಲ್ಕನೇ ಸ್ಥಾನ ಪಡೆಯಿತು.


ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿಜೇತಗೊಂಡ ತಂಡಗಳಿಗೆ ಕ್ರಮವಾಗಿ ರೂ೩ ಸಾವಿರ, ರೂ೨ ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.


ಕ್ವಿಜ್ ಮಾಸ್ಟರ್ ಸಿ.ಎಸ್.ಸುರೇಶ್ ಹಾಗೂ ಶಿಕ್ಷಕಿ ಎನ್.ಎಸ್.ಚಂದ್ರಕಲಾ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಿದ ನಂತರ ಮೊದಲ ನಾಲ್ಕು ಸ್ಥಾನಗಳಿಸಿದ ತಂಡಗಳಿಗೆ ಆರು ಸುತ್ತಿನಲ್ಲಿ ಮೌಖಿಕ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ೫೨ ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net