ನಾನು, ಶ್ರೀರಾಮುಲು ಅಣ್ಣ-ತಮ್ಮಂದಿರಂತೆ, ಸುಳ್ಳು ಸುದ್ದಿ ಹಬ್ಬಿಸುವ ಮನಸ್ಥಿತಿ ಕರೊನಾಕ್ಕಿಂತ ಅಪಾಯಕಾರಿ: ಕೆ. ಸುಧಾಕರ್​

Sudhakar 10 March 20
Published on

ಬೆಂಗಳೂರು: ಕರೊನಾ ವೈರಸ್ ವಿಚಾರದಲ್ಲಿ ಆರೋಗ್ಯ ಸಚಿವ ಶ್ರೀರಾಮಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್​ ನಡುವೆ ಯಾವುದೇ ಸಮನ್ವಯತೆ ಇಲ್ಲ. ಬದಲಾಗಿ ಪ್ರಚಾರ ಪಡೆಯಲು ಹವಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಸುಧಾಕರ್​ ಅವರೇ ಟ್ವೀಟ್​ ಮೂಲಕ ಇಂದು ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ವ್ಯಕ್ತಿಗಳ ವೈಯುಕ್ತಿಕ ಆಶಯಕ್ಕೆ ಮೀರಿದ ಸಂಕಷ್ಟದಲ್ಲಿ ಇಂದು ಜಗತ್ತು ನಿಂತಿದೆ. ನಾನಾಗಲಿ ಮತ್ತು ನನ್ನ ಸಹೋದರನಂತಿರುವ ಶ್ರೀ ರಾಮುಲು ಆಗಲಿ ಟೊಂಕ ಕಟ್ಟಿ ನಿಂತಿರುವುದು ಕರೊನಾ ಮಹಾಮಾರಿಯನ್ನು ಬಗ್ಗು ಬಡಿಯಲು ಮತ್ತು ಜನಹಿತ ಕಾಯುವುದೇ ನಮ್ಮ ಧ್ಯೇಯವಾಗಿದೆ. ಇದರಲ್ಲಿ ಪ್ರಚಾರ ಪಡೆಯುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ.

ಇನ್ನು ನಾವಿಬ್ಬರು ಜನರ ಮಧ್ಯೆ ಇದ್ದು, ಜನ ಸೇವೆ ಮಾಡಿಕೊಂಡು ಜನ ಪ್ರತಿನಿಧಿಗಳಾದವರು. ನಮ್ಮ ಜನರಿಂದ ಬರುವ ಶಹಬಾಷ್ ಗಿರಿಯೇ ನಮಗೆ ಶ್ರೀರಕ್ಷೆ ಇದರಲ್ಲಿ ಪ್ರಚಾರದ ಮಾತೆಲ್ಲಿ? ನಮ್ಮಿಬ್ಬರ ನಡುವೆ ಕಂದಕ ಹುಟ್ಟು ಹಾಕಿ ಜನ ಸಂಕಷ್ಟದಲ್ಲಿರುವ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮನಸ್ಥಿತಿ ಕರೊನಾಕ್ಕಿಂತ ಅಪಾಯಕಾರಿ ಎಂದು ತಿಳಿಸಿದರು.

ನಾನೊಬ್ಬ ವೈದ್ಯ ಅದಕ್ಕಿಂತ ಹೆಚ್ಚಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡವನು. ಈ ರೀತಿಯ ಮಾತುಗಳಿಗೆ ಧೃತಿಗೆಟ್ಟು ಕರ್ತವ್ಯ ವಿಮುಖನಾಗುವವನು ನಾನಲ್ಲ. ಪ್ರತಿಯೊಂದು ಟೀಕೆ ಪ್ರತಿ ಬಾರಿ ನನ್ನನ್ನು ಇನ್ನಷ್ಟು ಬಲಶಾಲಿಯಾಗಿ ಮಾಡಿದೆ. ನನಗೆ ಆತ್ಮ ಸ್ಥೈರ್ಯ ತುಂಬುತ್ತದೆ. “ನಿಂದಕರಿರಬೇಕಯ್ಯ“ ಅನ್ನುವ ಬಸವಣ್ಣನ ಮಾತಿನಂತೆ ಮುನ್ನುಗಿ ಇನ್ನಷ್ಟು ಜನತಾ ಜನಾರ್ಧನ ಸೇವೆ ಮಾಡಲು ಪ್ರೇರೇಪಿಸುತ್ತದೆ. ನಮ್ಮ ಒಗ್ಗಟನ್ನು ಕರೊನ ಮಹಾಮಾರಿಯನ್ನು ಓಡಿಸುವಲ್ಲಿ ತೋರಿಸೋಣ ಎಂದರು.

ಸುಳ್ಳು ಸುದ್ದಿ ಹಬ್ಬಿಸುವವರಿಗೆ ಅವರವರ ದೇವರು ಒಳ್ಳೆ ಬುದ್ಧಿ ಕೊಡಲೆಂದು ಪ್ರಾರ್ಥಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net