ರಾಜ್ಯ ಸರ್ಕಾರದ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ ವಾಗ್ವಾದ

25-klr-3
Published on

ಕೋಲಾರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಾಗ್ವಾದ ನಡೆಸಿದರು.

ನಗರದ ನಿವಾಸದಲ್ಲಿ ಮಂಗಳವಾರ ಅನಾರೋಗ್ಯ ಪೀಡಿತ ಬಡ ಜನರಿಗೆ ಸೇವಾ ಸಂಸ್ಥೆಯಿಂದ ಬಿಡುಗಡೆಯಾಗಿರುವ ಪರಿಹಾರ ನಿಧಿ ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ನೆಪದಲ್ಲಿ ಸರ್ಕಾರ ಕಳೆದ 4 ತಿಂಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡದೆ ಕಡೆಗಣಿಸಿದೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ಸ್ಥಿರತೆ ಇಲ್ಲದಿರುವುದರಿಂದ ಆಡಳಿತ ನಡೆಸಲಾಗುತ್ತಿಲ್ಲ, ಜನರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲಾಗದ ಸರ್ಕಾರದ ಕಾರ್ಯವೈಖರಿ ವಿರುದ್ಧ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಕರೊನಾ ನಿಭಾಯಿಸುವುದು ಕಷ್ಟದ ಕೆಲಸ ಎಂಬುದು ಎಲ್ಲರಿಗೂ ಗೊತ್ತು. ಹಾಗೆಂದ ಮಾತ್ರಕ್ಕೆ ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸಬಾರದು ಎಂದು ಹೇಳಿದವರು ಯಾರು? ಅಗತ್ಯ ಕಾರ್ಯಗಳಿಗೆ ಆದ್ಯತೆ ನೀಡುವುದು ಸರ್ಕಾರದ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದರು.

ನಗರಸಭೆಗೆ ಚುನಾವಣೆ ನಡೆದು 8 ತಿಂಗಳಾಗುತ್ತಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಪಡಿಸಿಲ್ಲ, ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಮುಂದೂಡಲಾಗಿದೆ, ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಿದ್ದರೆ ಜನರಿಗೆ ಕೊಟ್ಟ ಭರವಸೆಯಂತೆ ಆಡಳಿತ ನಡೆಸುತ್ತಿತ್ತು ಎಂದು ಟೀಕಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆಂಬ ಆರೋಪ ಸಲ್ಲ. ಸರ್ಕಾರದ ವೈಫಲ್ಯಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಲಿದ್ದಾರೆ, ಕಾಂಗ್ರೆಸ್ ಸಹ ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೆ ಹೋರಾಟ ಆರಂಭಿಸಿದೆ, ಸರ್ಕಾರ ನಡೆಸುತ್ತಿರುವವರು ಎಚ್ಚರಗೊಳ್ಳದಿದ್ದರೆ ಜನ ಪಾಠ ಕಲಿಸಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.

ಅನಾರೋಗ್ಯಕ್ಕೆ ಒಳಗಾದ ಆನಂದ್, ಬಹದ್ದೂರ್ ಕುಮಾರ್. ಶ್ರೀನಿವಾಸಗೌಡ, ಗೋಪಾಲಗೌಡ, ಲಕ್ಷ್ಮಯ್ಯ, ಸೀತಾರಾಮ್, ನಿಖಿಲ್, ಆರ್.ಪುರುಷೋತ್ತಮ್, ರಾಜಣ್ಣ, ಶೈಲಾವತಿ ಸೆರಿ 10 ಮಂದಿಗೆ ಇ್ಕೆೆ ಸೇವಾಸಂಸ್ಥೆಯಿಂದ 2,25 ಲಕ್ಷ ರೂ.ಗಳ ಚೆಕ್ ವಿತರಿಸಿದರು.

ಮುಖಂಡ ಯೂನಿಯನ್ ನಿರ್ದೇಶಕ ಸುರೇಶ್, ನಗರಸಭೆ ಸದಸ್ಯ ರಾಕೇಶ್‌ಗೌಡ, ವಕೀಲ ಹಾರೋಹಳ್ಳಿ ವೆಂಕಟೇಶ್, ಮಟ್ನಹಳ್ಳಿ ವೆಂಕಟೇಶ್‌ಗೌಡ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net