

ಕೋಲಾರ: ತಾಲೂಕಿನಲ್ಲಿ 2016-17ನೇ ಸಾಲಿನಲ್ಲಿ ಸಾಗುವಳಿ ಚೀಟಿ ನೀಡಿರುವವರಿಗೆ ಭೂ ಮಂಜೂರಾತಿ ಪತ್ರ ನೀಡುವ ಮೊದಲು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.
ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಕುಂದುಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಹಿಂದೆ ಅಧಿಕಾರದಲ್ಲಿದ್ದವರು ಒಂದೇ ಜಮೀನನ್ನು ಇಬ್ಬರು ಮೂವರಿಗೆ ಸಾಗುವಳಿ ಚೀಟಿ ಕೊಡಿಸಿದ್ದಾರೆ. ಇದರಿಂದ ಆ ಕುಟುಂಬಗಳು ಪರಸ್ಪರ ಬಡಿದಾಡಿಕೊಳ್ಳುವಂತಾಗಿದೆ. ಜತೆಗೆ ಹಿಂದಿನ ತಹಸೀಲ್ದಾರ್ ಕೂಡ ಅವರ ಅಕ್ರಮಕ್ಕೆ ಸಹಕಾರ ನೀಡಿದ್ದರು. ಇದೆಲ್ಲಾ ಈಗ ಅಮಾಯಕ ರೈತರ ಕುತ್ತಿಗೆಗೆ ಬಂದಿದೆ ಎಂದರು.
ಪಿ-ನಂಬರ್ ಸಮಸ್ಯೆ ಇಲಾಖೆಯಲ್ಲಿ ದೊಡ್ಡ ದಂಧೆಯಾಗಿದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅರ್ಜಿ ವಿಲೇವಾರಿ ಮಾಡಬೇಕು. ಪೈಕಿ ಪಹಣಿ ರದ್ದುಗೊಳಿಸಿ ಹೊಸ ಸರ್ವೇ ನಂಬರ್ ಕೊಡಲು ಸೂಚಿಸಲಾಗಿದೆ. ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಪ್ರತಿ ಮಂಗಳವಾರ ಹೋಬಳಿವಾರು ಕುಂದುಕೊರತೆ ಸಭೆ ನಡೆಸಲಾಗುತ್ತಿದೆ. ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಬಗ್ಗೆ ಕುರಿತು ಮುಂದಿನ ಸಭೆಗೆ ಮಾಹಿತಿ ನೀಡಲು ತಹಸೀಲ್ದಾರ್‌ಗೆ ನಿರ್ದೇಶನ ನೀಡಲಾಗಿದೆ ಎಂದರು.
ಅರ್ಜಿಗಳ ಮಹಾಪೂರ: ಸರ್ಕಾರಿ ಜಾಗ ಒತ್ತುವರಿ, ನಕಲಿ ದಾಖಲೆಗಳ ಸೃಷ್ಟಿ, ಸರ್ವೇ ಇಲಾಖೆ, ದಾಖಲೆ ತಿದ್ದುಪಡಿ, ಖಾತೆ ಬದಲಾವಣೆ, ಅಕ್ರಮ ಸಕ್ರಮ ಸೇರಿದಂತೆ ಪಿ ನಂಬರ್ ಸಮಸ್ಯೆ ಕುರಿತು 25ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.
ಕಾಮಂಡಹಳ್ಳಿ ಸಮೀಪದ ಸರ್ಕಾರ ಜಾಗವನ್ನು ಕಂದಾಯ ಅಧಿಕಾರಿಗಳು 6 ಮಂದಿ ಹೆಸರಿಗೆ ಖಾತೆ ಮಾಡಲು ನಕಲಿ ದಾಖಲೆ ಸೃಷ್ಟಿಸಿದ್ದು, ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯದಿಂದ ಆದೇಶವಾಗಿದ್ದರೂ ಪೊಲೀಸರು ಒತ್ತಡಗಳಿಗೆ ಮಣಿದು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಸಭೆಯಲ್ಲಿ ಧರಣಿ ನಡೆಸಲು ಮುಂದಾದರು. ಮಧ್ಯ ಪ್ರವೇಶಿಸಿದ ಶಾಸಕರು ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. ನಗರದ ಸುಲ್ತಾನ್ ಸಮೀಪದ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ಶೆಡ್ ತೆರವುಗೊಳಿಸುವಂತೆ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ರಾಜ್ಯ ರೈತ ಸೇನೆ ಕಾರ್ಯಕರ್ತರು ಶಾಸಕರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಶೋಭಿತಾ, ಜೆಡಿಎಸ್ ಜಿಲ್ಲಾ ಘಟಕ ಉಪಾಧ್ಯಕ್ಷ ಗೋಪಾಲಪ್ಪ, ಮುಖಂಡ ಗೋವಿಂದರಾಜು ಹಾಜರಿದ್ದರು.